ಮಂಗಳೂರು : ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕೆಲವು ಶಾಸಕರು ಆಡಳಿತ ವಿರೋಧ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿರುವುದು ಬಿಜೆಪಿಯ ಆಂತರಿಕ ಅಸಮಾಧಾನವನ್ನು ಬಯಲಿಗೆಳೆದಿದ್ದು, ಬಿಜೆಪಿ ಪಕ್ಷಕ್ಕೆ ಭವಿಷ್ಯವಿಲ್ಲ ಎಂಬುದನ್ನು ಅವರದೇ ಶಾಸಕರು ಒಪ್ಪಿಕೊಂಡಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತ, ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನವನ್ನು ಮೆಚ್ಚಿ ಬಿಜೆಪಿಯ ಶಾಸಕರು ಪರೋಕ್ಷವಾಗಿ ಕಾಂಗ್ರೆಸ್ ಪರ ನಿಲುವು ವ್ಯಕ್ತಪಡಿಸಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆಗಳಿಗೆ ದೊರೆತ ಪ್ರಮಾಣಪತ್ರವಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿಕೂಟದೊಳಗಿನ ಗೊಂದಲ ಮತ್ತು ಅಸಮಾಧಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದಲೂ ಹಾಗೂ ಪ್ರತಿಪಕ್ಷದ ಜನಪ್ರತಿನಿಧಿಗಳಿಂದಲೂ ಬೆಂಬಲ ವ್ಯಕ್ತವಾಗುತ್ತಿರುವುದು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ಇದರ ಪರಿಣಾಮವಾಗಿ ಜನಸಾಮಾನ್ಯರ ಜೀವನ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಅದರ ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಐವನ್ ಡಿ’ಸೋಜಾ ಟೀಕಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷವು ಜನರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದರೆ, ಬಿಜೆಪಿ-ಜೆಡಿಎಸ್ ಮೈತ್ರಿಕೂಟ ತನ್ನ ರಾಜಕೀಯ ಅಸ್ತಿತ್ವವನ್ನು ಮತ್ತಷ್ಟು ಕಳೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಜನರ ವಿಶ್ವಾಸವನ್ನು ಉಳಿಸಿಕೊಂಡು ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳ ಮೂಲಕ ರಾಜ್ಯದ ಜನರ ಸೇವೆಯನ್ನು ಮುಂದುವರಿಸಲಿದೆ ಎಂದು ಐವನ್ ಡಿ’ಸೋಜಾ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

