ಮಂಗಳೂರು : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ 33ನೇ ಘಟಿಕೋತ್ಸವ ಸಮಾರಂಭವು ಶುಕ್ರವಾರ, ಮೇ 15, 2026 ರಂದು ಮಧ್ಯಾಹ್ನ 3 ಗಂಟೆಗೆ ಡಾ. ಟಿ.ಎಂ.ಎ. ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ.
ಮೇ 16ರ, ಶನಿವಾರ ಮಧ್ಯಾಹ್ನ 2:30ಕ್ಕೆ ‘ಮಾಹೆ ಆನ್‌ಲೈನ್ ಶಿಕ್ಷಣʼದ 3ನೇ ಘಟಿಕೋತ್ಸವ ಆಯೋಜಿಸಲಾಗಿದ್ದು, ಆನ್‌ಲೈನ್ ಶಿಕ್ಷಣ ಪಡೆದ ಪದವೀಧರರಿಗೆ ಪದವಿ ಪ್ರದಾನ ಮಾಡಲಾಗುವುದು. ಇಂದಿನ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಹೆ ಮಂಗಳೂರು ಕ್ಯಾಂಪಸ್‌ನ ಸಹ ಕುಲಪತಿ ಡಾ. ದಿಲೀಪ್ ಜಿ. ನಾಯಕ್ ಅವರು, ʼಘಟಿಕೋತ್ಸವವು ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಜೀವನದ ಒಂದು ಪ್ರಮುಖ ಮೈಲಿಗಲ್ಲು. ಮಂಗಳೂರಿನಲ್ಲಿ ನಡೆಯುತ್ತಿರುವ ಮಾಹೆಯ 33ನೇ ಘಟಿಕೋತ್ಸವವು ಕೇವಲ ಅಂಕಗಳಿಕೆಯ ಸಂಭ್ರಮವಲ್ಲ, ಇದು ನಮ್ಮ ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ, ನೈತಿಕತೆ ಮತ್ತು ವೃತ್ತಿಪರ ಮೌಲ್ಯಗಳಿಗೆ ಸಂದ ಗೌರವವಾಗಿದೆ ಎಂದರು.
ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಬಿ. ಉಣ್ಣಿಕೃಷ್ಣನ್ ʼಘಟಿಕೋತ್ಸವವು ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸಿಗುವ ಅರ್ಹ ಮಾನ್ಯತೆಯ ಕ್ಷಣವಾಗಿದೆ.
ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್‌ನ ಡೀನ್ ಡಾ. ಅಶಿತಾ ಉಪ್ಪೂರು ʼಕಠಿಣ ಪರಿಶ್ರಮ ಮತ್ತು ನಿರಂತರ ಅಧ್ಯಯನದ ಮೂಲಕ ನಮ್ಮ ವಿದ್ಯಾರ್ಥಿಗಳು ಈ ಗುರಿ ತಲುಪಿದ್ದಾರೆ.
ಮೇ 15, 2026 ರಂದು ನಡೆಯಲಿರುವ ಘಟಿಕೋತ್ಸವ ಸಮಾರಂಭದಲ್ಲಿ ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್‌ನ ನಿರ್ದೇಶಕರಾದ ಪ್ರೊ. (ಡಾ.) ಸುದೀಪ್ ಗುಪ್ತಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರಿನ ನಿಟ್ಟೆ ಎಜುಕೇಶನ್ ಟ್ರಸ್ಟ್‌ನ (ಪರಿಗಣಿತ ವಿಶ್ವವಿದ್ಯಾಲಯ) ಸಹ ಕುಲಾಧಿಪತಿ ಡಾ. ಎಂ. ಶಾಂತಾರಾಮ್ ಶೆಟ್ಟಿ ಅವರು ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಮೇ 16ರ ಆನ್‌ಲೈನ್ ಶಿಕ್ಷಣದ ಘಟಿಕೋತ್ಸವ ನಡೆಯಲಿದೆ. ಈ ಸಮಾರಂಭದಲ್ಲಿ ವಿವಿಧ ಕುಲಾಧಿಪತಿಗಳು ಭಾಗವಹಿಸಲಿದ್ದಾರೆ. ಪದವಿ ಪ್ರದಾನ ಸಮಾರಂಭದಲ್ಲಿ ಪಿಎಚ್‌ಡಿ ಸೇರಿದಂತೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುವುದು. ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತರಿಗೆ ಶೈಕ್ಷಣಿಕ ಶ್ರೇಷ್ಠತೆಗಾಗಿ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಬದುಕಿನ ಹೊಸ ಪಯಣದ ಸಂಕಲ್ಪದೊಂದಿಗೆ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.
.

