ಪುತ್ತೂರು : ಸಾಕು ಪ್ರಾಣಿಗಳ ಮೇಲಿನ ಪ್ರೀತಿ ಎಷ್ಟರ ಮಟ್ಟಿಗೆ ಇರಬಹುದು ಎಂಬುದಕ್ಕೆ ಪುತ್ತೂರಿನ ಶ್ವಾನಪ್ರೇಮಿ ಗಣೇಶ್ ಕೇರ ಅವರು ಜೀವಂತ ಉದಾಹರಣೆಯಾಗಿದ್ದಾರೆ. ನಾಪತ್ತೆಯಾಗಿದ್ದ ತಮ್ಮ ಪ್ರೀತಿಯ ದೇಸಿ ತಳಿಯ ನಾಯಿ ‘ಚಿನ್ನು’ವನ್ನು ಪತ್ತೆಹಚ್ಚಿ ಕೊಟ್ಟ ವ್ಯಕ್ತಿಗೆ ಅವರು ಘೋಷಿಸಿದ್ದಂತೆ ₹50 ಸಾವಿರ ನಗದು ಬಹುಮಾನದ ಚೆಕ್ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.
ಪುತ್ತೂರು ತಾಲೂಕಿನ ಕಬಕ ಸಮೀಪದ ಪೋಳ್ಯ ನಿವಾಸಿಯಾಗಿರುವ ಗಣೇಶ್ ಕೇರ ಅವರು ಹಲವು ವರ್ಷಗಳಿಂದ ಅನಾಥ ಹಾಗೂ ಗಾಯಗೊಂಡ ನಾಯಿಗಳನ್ನು ಆಶ್ರಯಿಸಿ ಆರೈಕೆ ಮಾಡುತ್ತಿದ್ದಾರೆ. ಅವರ ಮನೆಯಲ್ಲಿ ವಿವಿಧ ತಳಿಗಳ ಸುಮಾರು 30ಕ್ಕೂ ಹೆಚ್ಚು ನಾಯಿಗಳು ಆಶ್ರಯ ಪಡೆದಿವೆ. ಅವುಗಳಲ್ಲಿ ‘ಚಿನ್ನು’ ಎಂಬ ದೇಸಿ ತಳಿಯ ನಾಯಿ ವಿಶೇಷ ಸ್ಥಾನ ಹೊಂದಿತ್ತು.
ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಚಿನ್ನುವನ್ನು ಗಣೇಶ್ ಕೇರ ಅವರು ರಕ್ಷಿಸಿ ಚಿಕಿತ್ಸೆ ನೀಡಿದ್ದರು. ಫಿಟ್ಸ್ (ಮೂರ್ಛೆ) ಸಮಸ್ಯೆಯಿಂದ ಬಳಲುತ್ತಿದ್ದ ಈ ನಾಯಿ ಮೂರು ವಾರಗಳ ಹಿಂದೆ ಏಕಾಏಕಿ ನಾಪತ್ತೆಯಾಗಿತ್ತು. ಇದರಿಂದ ಆತಂಕಗೊಂಡ ಗಣೇಶ್ ಕೇರ ಅವರು ನಾಯಿಯನ್ನು ಹುಡುಕಿಕೊಟ್ಟವರಿಗೆ ₹50 ಸಾವಿರ ಬಹುಮಾನ ಘೋಷಿಸಿ ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳು ಹಾಗೂ ಬ್ಯಾನರ್‌ಗಳ ಮೂಲಕ ಮಾಹಿತಿ ಹರಡಿದ್ದರು.
ಈ ನಡುವೆ ಪೋಳ್ಯ ನಿವಾಸಿ ಪುರಂದರ ಅವರು ನಾಪತ್ತೆಯಾಗಿದ್ದ ಚಿನ್ನುವನ್ನು ಗುರುತಿಸಿ ಮಾಲೀಕರಿಗೆ ಮಾಹಿತಿ ನೀಡಿದ್ದರು. ಮೊದಲ ಬಾರಿ ನಾಯಿ ತಪ್ಪಿಸಿಕೊಂಡಿದ್ದರೂ, ಬಳಿಕ ಮತ್ತೊಮ್ಮೆ ಕಂಡುಬಂದಾಗ ಸಮಯಪ್ರಜ್ಞೆ ಮೆರೆದು ಸುರಕ್ಷಿತವಾಗಿ ಹಿಡಿದು ಗಣೇಶ್ ಕೇರ ಅವರಿಗೆ ಒಪ್ಪಿಸಿದ್ದಾರೆ.
ತಮ್ಮ ಪ್ರೀತಿಯ ಶ್ವಾನ ಮರಳಿ ಮನೆ ಸೇರಿದ ಸಂತಸದಲ್ಲಿ ಗಣೇಶ್ ಕೇರ ಅವರು ಪುರಂದರ ಅವರನ್ನು ಮನೆಗೆ ಆಹ್ವಾನಿಸಿ ₹50 ಸಾವಿರ ಮೊತ್ತದ ಚೆಕ್ ಹಸ್ತಾಂತರಿಸಿ ಗೌರವಿಸಿದರು.
“ನಮ್ಮ ಚಿನ್ನು ಸುರಕ್ಷಿತವಾಗಿ ಮನೆಗೆ ಮರಳಿರುವುದು ತುಂಬಾ ಸಂತಸದ ವಿಚಾರ. ಅವಳನ್ನು ಪತ್ತೆಹಚ್ಚಿ ಕೊಟ್ಟ ಪುರಂದರ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಗಣೇಶ್ ಕೇರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

