ದಾವಣಗೆರೆ : ಜಿಲ್ಲೆಯ ಹರಿಹರದಲ್ಲಿ ಬಂಧಿಸಲ್ಪಟ್ಟಿರುವ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರನ ವಿಚಾರಣೆ ವೇಳೆ ದೇಶದ ಭದ್ರತಾ ವ್ಯವಸ್ಥೆಯನ್ನು ಎಚ್ಚರಗೊಳಿಸುವಂತಹ ಮಾಹಿತಿ ಹೊರಬಂದಿದೆ. ವಿಚಾರಣೆಯಲ್ಲಿರುವ 20 ವರ್ಷದ ಸುಹೇಲ್ ಎಂಬಾತ, ರಾಮ ಮಂದಿರ ಇರುವ ಆಯೋಧ್ಯ ನಗರವನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟದ ಸಂಚು ರೂಪಿಸುವ ಉದ್ದೇಶ ಹೊಂದಿದ್ದ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಹರಿಹರದ ಕೈಗಾರಿಕಾ ಪ್ರದೇಶದ ಖಾಸಗಿ ಕಾರ್ಖಾನೆಯಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಸುಹೇಲ್, ಸಾಮಾನ್ಯ ಕಾರ್ಮಿಕನಂತೆ ಬದುಕುತ್ತಿದ್ದರೂ ಆತನ ಚಟುವಟಿಕೆಗಳು ಅನುಮಾನಾಸ್ಪದವಾಗಿದ್ದ ಹಿನ್ನೆಲೆಯಲ್ಲಿ ನಿಗಾ ವಹಿಸಲಾಗಿತ್ತು. ಬಳಿಕ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ವಿಚಾರಣೆ ವೇಳೆ ಶಂಕಿತನ ಮೊಬೈಲ್ ಪರಿಶೀಲನೆ ನಡೆಸಿದಾಗ ಹಲವು ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ. ಪಾಕಿಸ್ತಾನದ ಕಂಟ್ರಿ ಕೋಡ್ ಹೊಂದಿರುವ ಮೊಬೈಲ್ ಸಂಖ್ಯೆಯೊಂದು ‘ರಾಣಾ ಬಾಯ್’ ಎಂಬ ಹೆಸರಿನಲ್ಲಿ ಸೇವ್ ಆಗಿರುವುದು ಪತ್ತೆಯಾಗಿದ್ದು, ಅಂತಾರಾಷ್ಟ್ರೀಯ ಉಗ್ರ ಜಾಲದೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆ ಕುರಿತು ತನಿಖೆ ಮುಂದುವರಿದಿದೆ.
ಇದರ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲ ರಹಸ್ಯ ಗುಂಪುಗಳ ಸದಸ್ಯತ್ವ, ಶಸ್ತ್ರಾಸ್ತ್ರಗಳೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳು ಹಾಗೂ ದೇಶವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಗಳು ಮೊಬೈಲ್‌ನಿಂದ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಪ್ರಾಥಮಿಕ ತನಿಖೆಯಲ್ಲಿ ಭಾರತದಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ಎಸಗುವ ಉದ್ದೇಶದ ಬಗ್ಗೆ ಸುಳಿವುಗಳು ದೊರೆತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ತುಮಕೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

