ಮೂಡುಬಿದಿರೆಯಲ್ಲಿ ನ. 7ರಂದು 5ನೇ ವರ್ಷದ ಸಾರ್ವಜನಿಕ ಗೂಡುದೀಪ–ರಂಗೋಲಿ ಸ್ಪರ್ಧೆ

0
14

ಮೂಡುಬಿದಿರೆ : ದೀಪಾವಳಿ ಹಬ್ಬದ ಪ್ರಯುಕ್ತ ಸಮಾಜ ಮಂದಿರ ಸಭಾ (ರಿ.) ಮೂಡುಬಿದಿರೆ ಮತ್ತು ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ಜಂಟಿ ಆಶ್ರಯದಲ್ಲಿ 5ನೇ ವರ್ಷದ ಬೆದ್ರ ಗೂಡುದೀಪ ಹಾಗೂ ರಂಗೋಲಿ ಸ್ಪರ್ಧೆಯನ್ನು 2026 ನವೆಂಬರ್ 7ರಂದು ಆಯೋಜಿಸಲಾಗಿದೆ.

ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿರುವ ಸ್ಪರ್ಧೆಯು ಸಂಜೆ 3.30ರಿಂದ ಆರಂಭವಾಗಲಿದೆ. ಆಧುನಿಕ ಗೂಡುದೀಪ, ಮಾದರಿ ಗೂಡುದೀಪ, ಸಾಂಪ್ರದಾಯಿಕ ಗೂಡುದೀಪ ಹಾಗೂ ರಂಗೋಲಿ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಆಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಬಹುಮಾನಗಳ ವಿವರ

ಗೂಡುದೀಪ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ₹5,000, ದ್ವಿತೀಯ ಬಹುಮಾನ ₹3,000 ಹಾಗೂ ತೃತೀಯ ಬಹುಮಾನ ₹2,000 ನೀಡಲಾಗುವುದು. ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ₹2,000, ದ್ವಿತೀಯ ಬಹುಮಾನ ₹1,500 ಹಾಗೂ ತೃತೀಯ ಬಹುಮಾನ ₹1,000 ನಿಗದಿಪಡಿಸಲಾಗಿದೆ.

ಸ್ಪರ್ಧೆಯು ಸಂಜೆ 4 ಗಂಟೆಗೆ ಆರಂಭವಾಗಲಿದ್ದು, ಭಾಗವಹಿಸಲು ಆಸಕ್ತರು ನವೆಂಬರ್ 5ರ ಗುರುವಾರ ಸಂಜೆ 5 ಗಂಟೆಯೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಸ್ಪರ್ಧೆಗೆ ಸಂಬಂಧಿಸಿದಂತೆ ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆಯಲ್ಲಿ ಸೀಮೆ ಕೊಲಿನ ಅಷ್ಟಪಟ್ಟಿ ಗೂಡುದೀಪಕ್ಕೆ ಕಿವಿ, ರೆಕ್ಕೆ ಹಾಗೂ ಬಾಲ ಇರಬೇಕು. ಕಲರ್ ಪೇಪರ್ ಬಳಸಿ ತಯಾರಿಸಿದ ಗೂಡುದೀಪದಲ್ಲಿ ಒಳಭಾಗದಲ್ಲಿ ದೀಪ ಅಳವಡಿಸಿ, ಹೊರಗೆ ಬೆಳಕು ಚೆಲ್ಲುವಂತೆ ತೂಗು ಹಾಕಬೇಕು. ಆಧುನಿಕ ಗೂಡುದೀಪ ವಿಭಾಗದಲ್ಲಿ ವಿವಿಧ ವಸ್ತುಗಳನ್ನು ಬಳಸಲು ಅವಕಾಶವಿದ್ದು, ಅಷ್ಟಪಟ್ಟಿ ವಿನ್ಯಾಸದ ಗೂಡುದೀಪವನ್ನು ತೂಗು ಹಾಕುವುದು ಕಡ್ಡಾಯವಾಗಿದೆ. ಮಾದರಿ ಗೂಡುದೀಪ ಸ್ಪರ್ಧೆಯಲ್ಲಿಯೂ ವಿವಿಧ ವಸ್ತುಗಳನ್ನು ಬಳಸಬಹುದಾಗಿದೆ. ಕಡಿಮೆ ಖರ್ಚಿನಲ್ಲಿ ತಯಾರಿಸಿದ ಕ್ರಿಯಾತ್ಮಕ ಗೂಡುದೀಪಗಳಿಗೆ ಆದ್ಯತೆ ನೀಡಲಾಗುವುದು. ಹಿಂದಿನ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಅದೇ ಮಾದರಿಯ ಗೂಡುದೀಪಗಳನ್ನು ಈ ಬಾರಿ ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ.

ರಂಗೋಲಿ ಸ್ಪರ್ಧೆಯಲ್ಲಿ ಚುಕ್ಕಿ ಹಾಕಿ ರಂಗೋಲಿ ಬಿಡಿಸುವುದು ಕಡ್ಡಾಯವಾಗಿದೆ. ಬಣ್ಣದ ರಂಗೋಲಿ ಪುಡಿಯನ್ನು ಮಾತ್ರ ಬಳಸಬೇಕು. ಬಣ್ಣದ ಕಾಗದ, ಹೂವು ಹಾಗೂ ವಿನ್ಯಾಸದ ಸಲಕರಣೆಗಳನ್ನು ಬಳಸಲು ಅವಕಾಶವಿರುವುದಿಲ್ಲ. 2×2 ಅಡಿ ಅಳತೆಯಲ್ಲಿ ರಂಗೋಲಿ ಬಿಡಿಸಬೇಕಾಗಿದ್ದು, ಬಣ್ಣ, ವಿನ್ಯಾಸ, ಅಚ್ಚುಕಟ್ಟುತನ, ಸೃಜನಶೀಲತೆ ಮತ್ತು ಒಟ್ಟಾರೆ ಪರಿಣಾಮದ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗುವುದು. ಸ್ಪರ್ಧೆಗೆ ಅಗತ್ಯವಿರುವ ವಸ್ತುಗಳನ್ನು ಸ್ಪರ್ಧಿಗಳೇ ತರಬೇಕು.

ಸ್ಪರ್ಧೆಯಲ್ಲಿ ಭಾಗವಹಿಸಲು ನವೆಂಬರ್ 5ರ ಗುರುವಾರ ಸಂಜೆ 5 ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು (9880849412), ಕಾರ್ಯದರ್ಶಿ ಮೇಘನಾ (9901709006) ಅವರನ್ನು ಸಂಪರ್ಕಿಸಬಹುದು. ಸಮಾಜ ಮಂದಿರ ಸಭಾ ಹಾಗೂ ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಸಾರ್ವಜನಿಕರಿಗೆ ಆಹ್ವಾನ ನೀಡಿದ್ದಾರೆ.