71ನೇ ಕನ್ನಡ ರಾಜ್ಯೋತ್ಸವ ಆಚರಣೆ

0
31

ಸುರತ್ಕಲ್ : ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಸುರತ್ಕಲ್‌ನ ಅನುದಾನಿತ ವಿದ್ಯಾದಾಯಿನೀ ಪ್ರೌಡ ಶಾಲೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಕನ್ನಡದ ನಾಡಧ್ವಜವನ್ನು ಹಾರಿಸಿ ಗೌರವ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೆಲ್ಲರೂ ಒಟ್ಟಾಗಿ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ಯನ್ನು ಅತ್ಯಂತ ಗೌರವಾನ್ವಿತವಾಗಿ ಹಾಡಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿದ ಹಿಂದು ವಿದ್ಯಾದಾಯಿನೀ ಸಂಘ (ರಿ) ಇದರ ಆಡಳಿತ ಮಂಡಳಿಯ ಗೌರವಾನ್ವಿತ ಸದಸ್ಯರಾದ ಹಾಗೂ ಶಾಲಾ ಹಳೆ ವಿದ್ಯಾರ್ಥಿಯಾದ ಎಚ್. ಸಂತೋಷ್ ಹತ್ವಾರ್ ಇವರು “ಕನ್ನಡ ಕೇವಲ ಭಾಷೆಯಲ್ಲ, ಅದೊಂದು ಸಂಸ್ಕೃತಿ. ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಬೇರೆ ಭಾಷೆಗಳನ್ನು ಕಲಿತರೂ, ತಮ್ಮ ಮಾತೃಭಾಷೆಯಾದ ಕನ್ನಡವನ್ನು ಮರೆಯಬಾರದು ಮತ್ತು ನಿತ್ಯ ಜೀವನದಲ್ಲಿ ಬಳಸಬೇಕು” ಮತ್ತು ಈ ನಾಡಿನ ಏಕೀಕರಣಕ್ಕಾಗಿ ಅನೇಕ ಮಹನೀಯರು ತ್ಯಾಗ ಮಾಡಿದ್ದಾರೆ.

ಅವರ ತ್ಯಾಗವನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಎಂದು ಹೇಳುತ್ತಾ ಶುಭಾಶಯವನ್ನು ನೀಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಲೇಡಿಹಿಲ್‌ನ ಎಸ್.ಎಲ್ ಶೇಟ್ ಡೈಮಂಡ್ ಹೌಸ್ ಇದರ ಮಾಲಕರಾದ ರವೀಂದ್ರ ಶೇಟ್ ಇಂದಿನ ತಂತ್ರಜ್ಞಾನದ ಯುಗದಲ್ಲಿ ನೀವು ಬೇರೆ ಭಾಷೆಗಳನ್ನು ಕಲಿಯಿರಿ, ಅದಕ್ಕೆ ಯಾವುದೇ ಅಭ್ಯಂತರವಿಲ್ಲ.

ಆದರೆ, ನಮ್ಮ ತಾಯ್ನುಡಿಯಾದ ಕನ್ನಡವನ್ನು ಎಂದಿಗೂ ಮರೆಯಬೇಡಿ ಎಂದು ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದರು. ಇನ್ನೋರ್ವ ಮುಖ್ಯ ಅತಿಥಿಯಾದ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಹರಿ.ಯಂ ಇವರು ಕನ್ನಡ ಕೇವಲ ಭಾಷೆಯಲ್ಲ ಅದು ಸಂಸ್ಕಾರ ಸಂಸ್ಕೃತಿಯ ಸಂಕೇತ. ನಿಮ್ಮಂತಹ ಯುವ ಪೀಳಿಗೆಯ ಕೈಯಲ್ಲಿ ಕನ್ನಡದ ಭವಿಷ್ಯವಿದೆ. ನೀವೆಲ್ಲರೂ ಉತ್ತಮವಾಗಿ ಓದಿ, ಮಹತ್ತರ ಸಾಧನೆ ಮಾಡಿ ಕರ್ನಾಟಕದ ಕೀರ್ತಿಯನ್ನು ಜಗದಗಲ ಪಸರಿಸುವಂತಾಗಲಿ ಎಂದು ಶುಭ ಹಾರ‍್ಯೆಸಿದರು. ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಸುಧಾಕರರಾವ್ ಪೇಜಾವರ್ ವಹಿಸಿ ಪ್ರಸ್ತಾವನ ನುಡಿಯಲ್ಲಿ ಶಾಲಾ ದಿನಗಳಲ್ಲಿ ನಾವು ಕೇವಲ ಪಠ್ಯ ಪುಸ್ತಕಗಳನ್ನು ಓದಿದರೆ ಸಾಲದು, ನಮ್ಮ ಭಾಷೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಅರಿಯಬೇಕು.

ಕನ್ನಡ ಕೇವಲ ಮಾತನಾಡುವ ಭಾಷೆಯಲ್ಲ, ಅದು ನಮ್ಮ ಉಸಿರು. ಕುವೆಂಪು, ಬೇಂದ್ರೆ, ಶಿವರಾಮ ಕಾರಂತರಂತಹ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳನ್ನು ಪಡೆದ ಹೆಮ್ಮೆ ನಮ್ಮದು. ವಿಜ್ಞಾನ, ತಂತ್ರಜ್ಞಾನ, ಕಲೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಿಗರು ಮುಂಚೂಣಿಯಲ್ಲಿದ್ದಾರೆ ಎಂದು ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪ್ರಖ್ಯಾತ ಕನ್ನಡ ಕವಿಗಳಿಂದ ರಚಿತವಾದ ಕನ್ನಡ ರಾಜ್ಯೋತ್ಸವ ಗೀತೆಗಳನ್ನು ಶಾಲಾ ವಿದ್ಯಾರ್ಥಿನಿಯರು ಹಾಡಿದರು ಮತ್ತು ಕನ್ನಡ ನಾಡು, ನುಡಿ ವೈಭವದ ಕುರಿತು ವಿದ್ಯಾರ್ಥಿನಿ ಭಾಷಣಗೈದು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ದಿವಸ್ಪತಿ ಎಲ್ಲರನ್ನು ಸ್ವಾಗತಿಸಿ ದಿನದ ಮಹತ್ವದ ಬಗ್ಗೆ ತಿಳಿಸಿದರು. ಸಹ ಶಿಕ್ಷಕಿಯಾದ ಉಮಾವತಿ ಕಾರ್ಯಕ್ರಮ ನಿರೂಪಿಸಿ, ಪುಪ್ಪಾ ವಂದಿಸಿದರು, ಕಾರ್ಯಕ್ರಮದಲ್ಲಿ ಶಾಲಾನಿವೃತ್ತ ಮುಖ್ಯೋಪಾಧ್ಯಾಯರುಗಳಾದ ಶಶಿಕಲಾ , ರೇವತಿ, ಹಾಗೂ ರಕ್ಷಕ ಶಿಕ್ಷಕ ಸಂಘದ ಸದಸ್ಯರುಗಳು, ಪೋಷಕರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು, ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.