ಆನೆಗುಡ್ಡೆ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

0
107

ಆನೆಗುಡ್ಡೆ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಬೆಳಿಗ್ಗೆ 9 ಗಂಟೆಗೆ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯದ ಧರ್ಮಗುರು ಫಾ. ಗಿಲ್ಬರ್ಟ್ ಡಿಸೋಜಾ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಮಾತಿನಲ್ಲಿ, ನಾವೆಲ್ಲರೂ ಭಾರತೀಯರೆಂಬ ಭಾವನೆಯೊಂದಿಗೆ ಜಾತಿ-ಮತ ಭೇದವಿಲ್ಲದೆ ದೇಶದ ಪ್ರಗತಿಗಾಗಿ ಶ್ರಮಿಸಬೇಕು. ಸಹಬಾಳ್ವೆ ಮತ್ತು ಸಹಜೀವನದ ಮೂಲಕ ಭಾರತದ ಐಕ್ಯತೆ ಹಾಗೂ ಸಮಗ್ರತೆಯನ್ನು ಕಾಪಾಡಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಾಲ್ಪಾಡಿ ಗ್ರಾಮದ ಮಾಜಿ ಪಂಚಾಯತ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಧ್ವಜಾರೋಹಣ ನೆರವೇರಿಸಿ, ದೇಶಕ್ಕಾಗಿ ತ್ಯಾಗ ಮಾಡಿದ ಮಹಾಪುರುಷರನ್ನು ಸ್ಮರಿಸಿದರು. ದೇಶದ ಶಾಂತಿ, ಸೌಹಾರ್ದತೆ ಮತ್ತು ಐಕ್ಯತೆಯನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನದ್ದಾಗಿದೆ ಎಂದು ಹೇಳಿದರು. ಆನೆಗುಡ್ಡೆ ಮಹಾಮಾಯಿ ದೇವಸ್ಥಾನದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು. ಅನೆಗುಡ್ಡೆ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷರಾದ ಪ್ರವೀಣ್ ಡಿಕುನ್ಹಾ, ಕಾರ್ಯದರ್ಶಿ ವಿಲ್ಮಾ ಡಿಕುನ್ಹಾ ಹಾಗೂ ಕಥೋಲಿಕ್ ಸಭಾ ಅಧ್ಯಕ್ಷರಾದ ಜೋಕಿಂ ಡಿಕುನ್ಹಾ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ವಿದ್ಯುತ್ ಲೈನ್‌ಮನ್‌ಗಳಾದ ಕೆ. ಮೋಹನ್ ಮತ್ತು ರವಿಕುಮಾರ್ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಚರ್ಚ್‌ನ ವಾರ್ಡ್ ಸದಸ್ಯರಿಂದ ಮಕ್ಕಳ ಬ್ಯಾಂಡ್ ವಾದನದೊಂದಿಗೆ ನಡೆದ ಆಕರ್ಷಕ ಪಥಸಂಚಲನವು ಎಲ್ಲರ ಗಮನ ಸೆಳೆಯಿತು.

ಕಥೋಲಿಕ್ ಸಭಾ ಅಧ್ಯಕ್ಷರಾದ ಜೋಕಿಂ ಡಿಕುನ್ಹಾ ಸ್ವಾಗತಿಸಿದರು. ಅನೆಗುಡ್ಡೆ ಶಾಲೆಯ ಮಾಜಿ ಮುಖ್ಯೋಪಾಧ್ಯಾಯರಾದ ನೊರ್ಬರ್ಟ್ ಪಿರೇರಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಚರ್ಚ್‌ನ ಧರ್ಮಭಕ್ತರು ಹಾಗೂ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆಂಡ್ರೂ ಪಿಂಟೊ ಹಾಗೂ ರಿಯೋನಾ ಡಿಕುನ್ಹಾ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿಹಿತಿಂಡಿಯನ್ನು ವಿತರಿಸಲಾಯಿತು.

ಸ್ವಚ್ಛತಾ ಸೇವಾ ಕಾರ್ಯ

ಕಾರ್ಯಕ್ರಮದ ನಂತರ ಚರ್ಚ್‌ನ ಬಾಂಧವರು ಸಾಮೂಹಿಕ ಸ್ವಚ್ಛತಾ ಸೇವಾ ಕಾರ್ಯದಲ್ಲಿ ಪಾಲ್ಗೊಂಡರು. ಗ್ರಾಮದ ರಸ್ತೆಗಳ ಬದಿಯಲ್ಲಿ ಬೆಳೆದಿದ್ದ ಹುಲ್ಲು ಹಾಗೂ ಗಿಡಗಂಟಿಗಳನ್ನು ಕತ್ತರಿಸಿ, ರಸ್ತೆಗಳನ್ನು ಸ್ವಚ್ಛಗೊಳಿಸಿದರು. ಸ್ವಾತಂತ್ರ್ಯ ದಿನಾಚರಣೆಯನ್ನು ಸಮಾಜ ಸೇವೆಯೊಂದಿಗೆ ಆಚರಿಸಿದ ಈ ಕಾರ್ಯವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.