
ಮೂಡುಬಿದಿರೆ : ವಿಶ್ವ ಹಿಂದೂ ಪರಿಷತ್–ಮೂಡುಬಿದಿರೆ ಹಾಗೂ ಬಜರಂಗದಳ ಪ್ರಖಂಡದ ವತಿಯಿಂದ ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧಿಯ ಮೂಡುಬಿದಿರೆ ನಗರದಲ್ಲಿ ಶುಕ್ರವಾರ ಸಂಜೆ ಪಂಜಿನ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ನಗರದ ಪ್ರಸಿದ್ಧ ಸಾವಿರ ಕಂಬ ಬಸದಿಯಿಂದ ಸಂಜೆ 7.30ಕ್ಕೆ ಪಂಜಿನ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಪಂಜಿನ ಬೆಳಕಿನೊಂದಿಗೆ ಸಾಗಿದ ಮೆರವಣಿಗೆ ಮೂಡುಬಿದಿರೆಯ ಐತಿಹಾಸಿಕ ಪರಂಪರೆ ಹಾಗೂ ಧಾರ್ಮಿಕ ವೈಭವವನ್ನು ಪ್ರತಿಬಿಂಬಿಸಿತು. ಸಾಂಪ್ರದಾಯಿಕ ವಾದ್ಯಮೇಳದೊಂದಿಗೆ ಸಾಗಿದ ಮೆರವಣಿಗೆಯುದ್ದಕ್ಕೂ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು. ಪಂಜಿನ ಬೆಳಕು ಹಾಗೂ ಭಕ್ತರ ಸಂಭ್ರಮದಿಂದ ಮೂಡುಬಿದಿರೆ ನಗರವು ಹಬ್ಬದ ವಾತಾವರಣದಲ್ಲಿ ಕಂಗೊಳಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪೊಲೀಸ್ ಉಪನಿರೀಕ್ಷಕ ರಾಜಾರಾಮ್ ನಾಗರಕಟ್ಟೆ ವಹಿಸಿದ್ದರು. ಪ್ರಾಂತ ಬಲೋಪಾಸನಾ ಕೇಂದ್ರ ಪ್ರಮುಖ ನರೇಶ್ ಬೌದ್ಧಿಕ್ ನೆರವೇರಿಸಿದರು. ವಿಭಾಗ ವಿಶೇಷ ಸಂಪರ್ಕ ಪ್ರಮುಖ ದೇವಿಪ್ರಸಾದ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಮೂಡುಬಿದಿರೆ ಕಾರ್ಯಾಧ್ಯಕ್ಷ ಚೇತನ್ ಶೆಟ್ಟಿ, ಅಧ್ಯಕ್ಷ ಶಾಂತರಾಮ್ ಕುಡ್ವ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಗಣ್ಯ ಅತಿಥಿಗಳ ಆಗಮನದ ಬಳಿಕ ಭಾರತ ಮಾತೆಗೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಚೇತನ್ ಶೆಟ್ಟಿ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ದೇವಿಪ್ರಸಾದ್ ಶೆಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು. ಅಧ್ಯಕ್ಷ ರಾಜಾರಾಮ್ ನಾಗರಕಟ್ಟೆ ಅಧ್ಯಕ್ಷೀಯ ಭಾಷಣ ಮಾಡಿದರು.
ಮೂಡುಬಿದಿರೆಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವ ಪಡೆದುಕೊಂಡಿವೆ.
