ಕಾಪು : ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್, ಕಾಪು ಹಾಗೂ ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ ಮತ್ತು ಎಜುಕೇಷನ್ ಟ್ರಸ್ಟ್, ಕಾಪು ಇದರ ಅಂಗಸಂಸ್ಥೆಯ ಆಶ್ರಯದಲ್ಲಿ, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್, ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಮತ್ತು ಮಂಗಳೂರಿನ ಅಫಿಲಿಯನ್ಸ್ ಟೆಕ್ನಾಲಜಿ ಸಹಯೋಗದಲ್ಲಿ 9ನೇ ಕರ್ನಾಟಕ ರಾಜ್ಯ ಸ್ಕೂಲ್ಸ್ ಚೆಸ್ ಚಾಂಪಿಯನ್ಶಿಪ್–2026ರ ಉದ್ಘಾಟನಾ ಸಮಾರಂಭವು ಶನಿವಾರ ಕಾಪು ಶ್ರೀ ಹಳೇ ಮಾರಿಯಮ್ಮ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಇಪ್ಪತ್ತು ವರ್ಷಗಳಿಂದ ಸಂಸ್ಥೆ ನಿರಂತರವಾಗಿ ಚೆಸ್ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಕಾಪು ಅಭಿವೃದ್ಧಿಯತ್ತ ಸಾಗುತ್ತಿರುವ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಸ್ಪರ್ಧಿಗಳಿಗೆ ಶುಭ ಹಾರೈಸಿದರು.
ಚೆಸ್ ಪಂದ್ಯಾಟಕ್ಕೆ ಕಾಪು ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತಸರ ಮನೋಹರ್ ಶೆಟ್ಟಿ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಆರ್‌ಪಿಎಲ್‌ನ ಜನರಲ್ ಮ್ಯಾನೇಜರ್ ಮಂದಾರ ವಿ. ಕಾಳೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಡುಪಿ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ವ್ಯಾಸರಾಜ್ ತಂತ್ರಿ, ಅಫಿಲಿಯನ್ಸ್ ಟೆಕ್ನಾಲಜಿಯ ಸ್ಥಾಪಕ ಅವಿನಾಶ್ ಶೆಟ್ಟಿ, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಮಧುಕರ್ ಟಿ., ಉಜ್ವಲ್ ಸಂಸ್ಥೆಯ ಮಾಲೀಕ ಅಜಯ್ ಪುರುಷೋತ್ತಮ ಶೆಟ್ಟಿ, ಕಾಪು ಶ್ರೀ ಹಳೇ ಮಾರಿಯಮ್ಮ ಗುಡಿಯ ಮಾಜಿ ಆಡಳಿತ ಮೊಕ್ತಸರ ಶ್ರೀಧರ ಶೆಣೈ ಹಾಗೂ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾದ ಅಧ್ಯಕ್ಷ ಡಾ. ರಾಜಗೋಪಾಲ್ ಶೆಣೈ ಉಪಸ್ಥಿತರಿದ್ದು ಶುಭ ಹಾರೈಸಿದರು.
ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ ಮತ್ತು ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಉಮಾನಾಥ ಕಾಪು ಅತಿಥಿಗಳನ್ನು ಸ್ವಾಗತಿಸಿದರು. ಸೌಂದರ್ಯ ಯು.ಕೆ. ಕಾರ್ಯಕ್ರಮ ನಿರೂಪಿಸಿದರೆ, ಸಾಕ್ಷತ್ ಯು.ಕೆ. ವಂದಿಸಿದರು.

