ಮಂಗಳೂರು : ರಾಜ್ಯದ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದೆ. 2026-27ನೇ ಸಾಲಿನ ಉಚಿತ ವಿದ್ಯಾರ್ಥಿ ಬಸ್ ಪಾಸ್‌ಗಾಗಿ ಇಂದಿನಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈಗಾಗಲೇ ಶಾಲಾ-ಕಾಲೇಜುಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ, ಉಚಿತ ಬಸ್ ಪಾಸ್ ಘೋಷಣೆಗೆ ಮುನ್ನ ಶುಲ್ಕ ಪಾವತಿಸಿ ಬಸ್ ಪಾಸ್ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರ ಹಣ ಮರುಪಾವತಿ ಮಾಡಲು ನಿರ್ಧರಿಸಿದೆ.
ಉಚಿತ ಬಸ್ ಪಾಸ್ ಯೋಜನೆಯಡಿ ಈಗಾಗಲೇ ಬಸ್ ಪಾಸ್ ಪಡೆದು ಶುಲ್ಕ ಪಾವತಿಸಿರುವ ವಿದ್ಯಾರ್ಥಿಗಳು ತಾವು ಪಾವತಿಸಿದ ಮೊತ್ತವನ್ನು ಮರಳಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಅಗತ್ಯ ಆದೇಶಗಳನ್ನು ಹೊರಡಿಸಿವೆ.
ಸರ್ಕಾರದ ಸೂಚನೆಯಂತೆ, ಅರ್ಹ ವಿದ್ಯಾರ್ಥಿಗಳಿಂದ ಅಗತ್ಯ ಮಾಹಿತಿ ಪಡೆದು 7 ದಿನಗಳೊಳಗೆ ಅವರು ಪಾವತಿಸಿದ ಬಸ್ ಪಾಸ್ ಶುಲ್ಕವನ್ನು ಅವರ ಬ್ಯಾಂಕ್ ಖಾತೆಗೆ ಮರುಪಾವತಿಸಲಾಗುವುದು ಎಂದು ಸಾರಿಗೆ ನಿಗಮಗಳು ಸ್ಪಷ್ಟಪಡಿಸಿವೆ.
ಈ ಯೋಜನೆಯಿಂದ ರಾಜ್ಯದ ಲಕ್ಷಾಂತರ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಉಚಿತ ಬಸ್ ಪ್ರಯಾಣದ ಜೊತೆಗೆ ಈಗಾಗಲೇ ಪಾವತಿಸಿದ ಶುಲ್ಕವೂ ಮರಳಿ ದೊರೆಯಲಿದೆ. ವಿದ್ಯಾರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆಯುವಂತೆ ಸರ್ಕಾರ ಮನವಿ ಮಾಡಿದೆ.

