ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮಾಚೆರ್ಲಾ ಪಟ್ಟಣದಲ್ಲಿ ಘೋರ ಕೃತ್ಯವೊಂದು ಸಂಭವಿಸಿದೆ. ಮಾಚೆರ್ಲಾದಲ್ಲಿ ಸರ್ಕಾರಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವ 35 ವರ್ಷದ ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ‘ದಾಹವಾಗುತ್ತಿದೆ, ಕುಡಿಯಲು ಸ್ವಲ್ಪ ನೀರು ಕೊಡಿ’ ಎಂದು ಕೇಳಿ ನಂಬಿಸಿ ಮನೆಯೊಳಗೆ ಪ್ರವೇಶಿಸಿದ್ದಾನೆ.
ಮನೆಯೊಳಗೆ ಹೋದ ತಕ್ಷಣ ಆತ ಮಹಿಳೆಯ ಮೇಲೆ ಲೈಂಗಿಕ ದಾಳಿಗೆ ಯತ್ನಿಸಿದ್ದಾನೆ. ಸಂತ್ರಸ್ತೆ ತನಗೆ ಅನಾರೋಗ್ಯ (ಎಚ್‌ಐವಿ) ಇದೆ ಎಂದು ಎಷ್ಟೇ ಮೊರೆ ಇಟ್ಟರೂ ಕಿಂಚಿತ್ತೂ ದಯೆ ತೋರದ ಕಿರಾತಕ, ಆಕೆಯ ಕುತ್ತಿಗೆಗೆ ಸ್ಕಾರ್ಫ್‌ನಿಂದ ಬಿಗಿದು, ಕತ್ತಿ ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ. ಅಷ್ಟಕ್ಕೇ ನಿಲ್ಲದ ಆತ ಮಹಿಳೆಯ ಮರ್ಮಾಂಗಕ್ಕೆ ಕಬ್ಬಿಣದ ರಾಡ್ ಚುಚ್ಚಿ ಅತ್ಯಂತ ಕ್ರೂರವಾಗಿ ಹಿಂಸಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.
ಮಹಿಳೆಯ ಜೊತೆ ವಾಸವಿದ್ದ ಆಕೆಯ ಸೋದರಳಿಯ ಪರೀಕ್ಷೆ ಮುಗಿಸಿ ಪೋಷಕರ ಬಳಿ ಹೋಗಿದ್ದನು. ಸಾಯಂಕಾಲ ಅತ್ತೆಗೆ ಫೋನ್ ಮಾಡಿದಾಗ ಅವರು ಸ್ವೀಕರಿಸದ ಕಾರಣ ಅನುಮಾನಗೊಂಡು ಸಂಬಂಧಿಕರನ್ನು ಮನೆಗೆ ಕಳುಹಿಸಿದ್ದಾನೆ. ಸಂಬಂಧಿಕರು ಹೋಗಿ ನೋಡಿದಾಗ ಮಹಿಳೆ ರಕ್ತದ ಮಡುವಿನಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ನರಸರಾವ್ ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾಚೆರ್ಲಾ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಲ್ನಾಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ಆರೋಪಿಯ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಪಟ್ಟಣದ ಸಿಸಿಟಿವಿ ಫುಟೇಜ್‌ಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ.

