ಡಿಜಿಟಲ್​ ಸಾಕ್ಷರತಾ ಅಭಿಯಾನಕ್ಕೆ ಚಾಲನೆ

0
10


ಉಡುಪಿ: ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣದ ಅಗತ್ಯವಾಗಿದೆ. ಕಾಲೇಜಿನ ಬಾಗಿಲಿನಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್​ ಪ್ರಯೋಗಾಲಯ ಬಳಸುವ ಅವಕಾಶ ಲಭ್ಯವಾಗಿದೆ. ಈ ವ್ಯವಸ್ಥೆಯು ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನವರ್ಧನೆಗೆ ಅತ್ಯಂತ ಪೂರಕ ಎಂದು ಶಾಸಕ ಯಶ್​ ಪಾಲ್​ ಸುವರ್ಣ ಹೇಳಿದರು.
ಅಜ್ಜರಕಾಡು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೊಬೈಲ್​ ಕಂಪ್ಯೂಟರ್​ ಲ್ಯಾಬ್​ ಮೂಲಕ ಇನ್ಫೋಸಿಸ್​ ಫೌಂಡೇಶನ್​ ವತಿಯಿಂದ ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಡಿಜಿಟಲ್​ ಸಾಕ್ಷರತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಾಲಾ ದಿನಗಳಲ್ಲಿಯೇ ಮಾಹಿತಿ ತಂತ್ರಜ್ಞಾನದ ವಿಪುಲ ಅವಕಾಶಗಳ ಬಗ್ಗೆ ಮಾಹಿತಿ ನೀಡಿ ಭವಿಷ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗ ಪಡೆಯಲು ಈ ತರಬೇತಿ ಸಹಕಾರಿಯಾಗಲಿದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಅಧ್ಯಕ್ಷತೆ ವಹಿಸಿದ್ದರು. ಡಯಟ್​ ಪ್ರಾಂಶುಪಾಲ ಡಾ. ಅಶೋಕ್​ ಕಾಮತ್​ , ಬ್ರಹ್ಮಾವರ – ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಪಿ., ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ, ಸರ್ಕಾರಿ ಪದವಿ ಪೂರ್ವ ಕಾಲೇಜು – ಪ್ರಾಂಶುಪಾಲ ಜಗದೀಶ್​ ಕುಮಾರ್​, ಉಪನ್ಯಾಸಕ ಸುರೇಂದ್ರ , ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣ ಭಟ್​, ಐಕ್ಯೂಎಸಿ ಸಂಚಾಲಕಿ ಡಾ. ಶ್ರೀಮತಿ ಅಡಿಗ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ರಾಜೇಂದ್ರ ಕೆ., ಮಾಹಿತಿ ಮತ್ತು ತಂತ್ರಜ್ಞಾನ ಸಮಿತಿಯ ಸಂಚಾಲಕ ಸಚಿನ್​ ಕೇಣೇಕರ್​ ಉಪಸ್ಥಿತರಿದ್ದರು.