ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಆರೋಪ : ಯುವಕನ ಬರ್ಬರ ಹತ್ಯೆ..!

0
110

ಪಂಜಾಬ್‌ನ ಮಾನ್ಸಾದಲ್ಲಿ 25 ವರ್ಷದ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಭೀಕರವಾಗಿ ಹೊಡೆದು ಕೊಂದಿರುವ ಆಘಾತಕಾರಿ ಘಟನೆ ಸಂಭವಿಸಿದೆ. ವಿವಾಹಿತ ಮಹಿಳೆಯ ಕುಟುಂಬ ಸದಸ್ಯರು ಈ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮೃತನನ್ನು ಖೋಖರ್ ರಸ್ತೆಯ ನಿವಾಸಿ ಜಶನ್‌ದೀಪ್ ಸಿಂಗ್ (25) ಎಂದು ಗುರುತಿಸಲಾಗಿದೆ. ಬೊಲೆರೊ ವಾಹನದಲ್ಲಿ ಬಂದ ನಾಲ್ಕೈದು ಪುರುಷರು ಮತ್ತು ಇಬ್ಬರು ಮಹಿಳೆಯರ ತಂಡವು ಜಶನ್‌ದೀಪ್‌ನನ್ನು ಬೀದಿಯಲ್ಲೇ ಹಿಡಿದು ಅಮಾನವೀಯವಾಗಿ ಹಲ್ಲೆ ನಡೆಸಿದೆ. ಜಶನ್‌ದೀಪ್‌ನ ತಂದೆ ಗುರಸೇವಕ್ ಸಿಂಗ್ ಪ್ರಕಾರ, ಎಲ್ಲರ ಕಣ್ಣೆದುರೇ ಆತನನ್ನು ತೀವ್ರವಾಗಿ ಹೊಡೆಯಲಾಗಿದೆ.

ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ನಿರ್ದಯವಾಗಿ ಹೊಡೆಯಲಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ. ಹಲ್ಲೆಯಿಂದಾಗಿ ಯುವಕನ ಕೈಕಾಲುಗಳು ಮುರಿದಿದ್ದು, ಗಂಭೀರ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಮೂವರು ಮಕ್ಕಳ ತಾಯಿಯಾದ ಅದೇ ಬಡಾವಣೆಯ ವಿವಾಹಿತ ಮಹಿಳೆಯೊಂದಿಗೆ ಜಶನ್‌ದೀಪ್ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಮಹಿಳೆಯು ತನ್ನ ಮಗನಿಗೆ ಪದೇ ಪದೇ ಕರೆ ಮಾಡುತ್ತಿದ್ದಳು, ಇದನ್ನು ನಿಲ್ಲಿಸುವಂತೆ ನಾವು ಕೇಳಿಕೊಂಡಿದ್ದೆವು ಎಂದು ಸಂತ್ರಸ್ತನ ತಾಯಿ ತಿಳಿಸಿದ್ದಾರೆ. ಈ ಹಿಂದೆಯೂ ಇದೇ ವಿಚಾರವಾಗಿ ಆತನ ಮೇಲೆ ದಾಳಿ ನಡೆದಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.

ಘಟನೆಯ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತನ ಕುಟುಂಬಸ್ಥರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ವೈಯಕ್ತಿಕ ದ್ವೇಷಕ್ಕಾಗಿ ಕಾನೂನನ್ನು ಕೈಗೆತ್ತಿಕೊಂಡು ಇಂತಹ ಭೀಕರ ಕೊಲೆ ನಡೆಸಿರುವುದು ಮಾನ್ಸಾ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ.

LEAVE A REPLY

Please enter your comment!
Please enter your name here