ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಅಭಿವೃದ್ಧಿಪಡಿಸಲಾದ ಕೆರೆಯ ಅಸ್ತಿತ್ವಕ್ಕೆ ಈಗ ಸಂಚಕಾರ ಬಂದಿದೆ. ಕೆರೆಯ ಪರಿಸರದಲ್ಲಿ ಅವೈಜ್ಞಾನಿಕವಾಗಿ ಮಣ್ಣು ಮತ್ತು ಕಸ ಕಡ್ಡಿಗಳನ್ನು ಸುರಿಯಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷರು ತೀವ್ರವಾಗಿ ಆಗ್ರಹಿಸಿದ್ದಾರೆ.
ಗೌಡಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ರಾಮನಹಳ್ಳಿ ಗ್ರಾಮದ ಕೆರೆಯನ್ನು ದೊಡ್ಡ ಮೊತ್ತದ ಅನುದಾನ ಬಳಸಿ ಇತ್ತೀಚೆಗಷ್ಟೇ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಕೆಲವು ಕಿಡಿಗೇಡಿಗಳು ಹೊರಗಿನಿಂದ ಟ್ರ್ಯಾಕ್ಟರ್‌ಗಳ ಮೂಲಕ ಮಣ್ಣು ಮತ್ತು ಕಸವನ್ನು ತಂದು ಕೆರೆಯ ಪಕ್ಕದಲ್ಲಿ ಹಾಗೂ ರಸ್ತೆ ಬದಿಯಲ್ಲಿ ಸುರಿಯುತ್ತಿದ್ದಾರೆ. ಈ ಅನಾಗರಿಕ ಕೃತ್ಯದಿಂದ ಕೆರೆಯ ಮುಚ್ಚಿ ಹೋಗುವ ಭೀತಿ ಎದುರಾಗಿದ್ದು, ಹಾಗೂ ರಸ್ತೆಯ ಸುಗಮ ಸಂಚಾರಕ್ಕೂ ಅಡ್ಡಿಯಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷರು, “ಸರ್ಕಾರದ ಹಣದಲ್ಲಿ ಕೆರೆ ಅಭಿವೃದ್ಧಿ ಮಾಡಿರುವುದು ಸಾರ್ವಜನಿಕರ ಅನುಕೂಲಕ್ಕಾಗಿ. ಆದರೆ, ಕೆಲವರು ಸ್ವಾರ್ಥಕ್ಕಾಗಿ ಅಥವಾ ಬೇಜವಾಬ್ದಾರಿಯಿಂದ ಕೆರೆಯ ಹತ್ತಿರವೇ ಮಣ್ಣು ಸುರಿಯುತ್ತಿರುವುದು ಖಂಡನೀಯ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮಣ್ಣು ಸುರಿದ ಮಾಲೀಕರು ಹಾಗೂ ಅದನ್ನು ಹೊತ್ತು ತಂದ ಟ್ರ್ಯಾಕ್ಟರ್ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಅಭಿವೃದ್ಧಿ ಕಂಡ ಕೆರೆಯ ಸೌಂದರ್ಯ ಮತ್ತು ಪರಿಸರ ಉಳಿಸಲು ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರು ಪ್ರಾಸ್ಸಿಸ್ ಡಿಸೋಜ ತಿಳಿಸಿದರೆ

