ಮೈಸೂರು : ಡಾ. ಆರ್. ಬಾಲಸುಬ್ರಮಣ್ಯಂ ಅವರು ನೀತಿ ಆಯೋಗ್ ಪೂರ್ಣಕಾಲಿಕ ಸದಸ್ಯರಾಗಿ ನೇಮಕ

0
4

ಮೈಸೂರು : ಕೇಂದ್ರ ಸರ್ಕಾರವು ಮೈಸೂರು ಮೂಲದ ಖ್ಯಾತ ಸಮಾಜಸೇವಕ ಹಾಗೂ ಸಾರ್ವಜನಿಕ ನೀತಿ ತಜ್ಞ ಡಾ. ಆರ್. ಬಾಲಸುಬ್ರಮಣ್ಯಂ ಅವರನ್ನು ನೀತಿ ಆಯೋಗ್ (NITI Aayog)‌ನ ಪೂರ್ಣಕಾಲಿಕ ಸದಸ್ಯರಾಗಿ ನೇಮಕ ಮಾಡಿದೆ.

ಡಾ. ಬಾಲಸುಬ್ರಮಣ್ಯಂ ಅವರು Swami Vivekananda Youth Movement (SVYM) ಹಾಗೂ Grassroots Research and Advocacy Movement (GRAAM) ಸಂಸ್ಥೆಗಳ ಸ್ಥಾಪಕರಾಗಿದ್ದಾರೆ. ಅರುಣಾಚಲ ಪ್ರದೇಶದ ಡಾ. ಜೋರಾಮ್ ಅನಿಯಾ ಅವರನ್ನೂ ಇದೇ ಹುದ್ದೆಗೆ ನೇಮಕ ಮಾಡಲಾಗಿದೆ.

‘ವಿಕಸಿತ ಭಾರತ’ ಪರಿಕಲ್ಪನೆಗೆ ವೇಗ ನೀಡುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಹಾಗೂ ಜನಆಧಾರಿತ ಆಡಳಿತ ಅನುಭವ ಹೊಂದಿದ ವ್ಯಕ್ತಿಗಳನ್ನು ದೇಶದ ಪ್ರಮುಖ ನೀತಿ ರೂಪಿಸುವ ಸಂಸ್ಥೆಗೆ ಸೇರಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಪ್ರಧಾನಿ Narendra Modi ಅವರು ನೀತಿ ಆಯೋಗ್ ಅಧ್ಯಕ್ಷರಾಗಿದ್ದಾರೆ.

ನೇಮಕಾತಿ ಕುರಿತು ಪ್ರತಿಕ್ರಿಯಿಸಿದ ಡಾ. ಬಾಲಸುಬ್ರಮಣ್ಯಂ, “ಈ ಗೌರವಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ದೇಶ ಸೇವೆ ಮಾಡುವ ಅವಕಾಶ ದೊರೆತಿರುವುದು ಹೆಮ್ಮೆ. ಇದು ಗ್ರಾಮೀಣ ಮತ್ತು ನಾಗರಿಕ ಸಮಾಜದ ಧ್ವನಿಯನ್ನು ಸರ್ಕಾರ ಆಲಿಸಲು ಬಯಸುತ್ತಿರುವುದರ ಸಂಕೇತ” ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ಪ್ರಧಾನಿ ಮೋದಿ ಅವರು ಡಾ. ಬಾಲಸುಬ್ರಮಣ್ಯಂ ಹಾಗೂ ಡಾ. ಜೋರಾಮ್ ಅನಿಯಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇವರ ಅನುಭವ ಹಾಗೂ ಪ್ರಮುಖ ವಿಷಯಗಳ ಅರಿವು ದೇಶದ ನೀತಿ ರೂಪಿಕರಣವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಾ. ಆರ್. ಬಾಲಸುಬ್ರಮಣ್ಯಂ ಪರಿಚಯ

ಡಾ. ಆರ್. ಬಾಲಸುಬ್ರಮಣ್ಯಂ ಅವರು ಅಭಿವೃದ್ಧಿ ಅಧ್ಯಯನ ತಜ್ಞ, ಸಾರ್ವಜನಿಕ ನೀತಿ ವಕ್ತಾರ, ಲೇಖಕ ಹಾಗೂ ನಾಯಕತ್ವ ಶಿಕ್ಷಣತಜ್ಞರಾಗಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

ಮೈಸೂರು ಮೆಡಿಕಲ್ ಕಾಲೇಜ್ ಮತ್ತು ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ MBBS ಪದವಿ ಪಡೆದಿರುವ ಅವರು ನಾಯಕತ್ವ ಮತ್ತು ಸಾರ್ವಜನಿಕ ನೀತಿ ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆದು ಮ್ಯಾನೇಜ್ಮೆಂಟ್ ಮತ್ತು ಲೀಡರ್‌ಶಿಪ್‌ನಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.

ಅವರು ಅಮೆರಿಕದ Cornell University ನಲ್ಲಿ ಫ್ಯಾಕಲ್ಟಿಯಾಗಿ ಸೇವೆ ಸಲ್ಲಿಸಿದ್ದು, ಆಡಳಿತ ಸುಧಾರಣೆ, ಪ್ರಜಾಪ್ರಭುತ್ವ ಸಂಸ್ಥೆಗಳ ಬಲವರ್ಧನೆ ಹಾಗೂ ಸರ್ಕಾರದ ಸಾಮರ್ಥ್ಯ ನಿರ್ಮಾಣ ಕುರಿತಂತೆ ಹಲವು ಸರ್ಕಾರಗಳಿಗೆ ಸಲಹೆಗಾರರಾಗಿದ್ದಾರೆ.

‘I, The Citizen’, ‘Voices from the Grassroots’, ‘Leadership Lessons for Daily Living’ ಹಾಗೂ ‘Power Within: The Leadership Legacy of Narendra Modi’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

ಪ್ರಸ್ತುತ ಅವರು ಭಾರತ ಸರ್ಕಾರದ Capacity Building Commission ಸದಸ್ಯ (HR) ಆಗಿಯೂ, SEBI ಸಾಮಾಜಿಕ ಷೇರು ವಿನಿಮಯ ಸಲಹಾ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here