- ವರದಿ : ಮಂದಾರ ರಾಜೇಶ್ ಭಟ್
ಶ್ರೀನಿವಾಸಪುರ: ಮೂಡುಬಿದಿರೆ ಸಮೀಪದ ಶ್ರೀನಿವಾಸಪುರ ಗುಂಡ್ಯಡ್ಕದ ಪವಿತ್ರ ಕ್ಷೇತ್ರವಾದ ಶ್ರೀ ವಿಠೋಬ ರುಕುಮಾಯಿ ದೇವಸ್ಥಾನದಲ್ಲಿ ಪುರುಷೋತ್ತಮ ಮಾಸದ (ಅಧಿಕ ಮಾಸ) ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಸರಣಿಯನ್ನು ಆಯೋಜಿಸಲಾಗಿದೆ.
ಈ ಪವಿತ್ರ ಆಚರಣೆಯು 2026ರ ಮೇ 17ರ ಭಾನುವಾರದಿಂದ ಆರಂಭಗೊಂಡು ಜೂನ್ 15ರ ಸೋಮವಾರದವರೆಗೆ ಅತ್ಯಂತ ವೈಭವದಿಂದ ನಡೆಯಲಿದೆ. ಪುರುಷೋತ್ತಮ ಮಾಸವು ಆಧ್ಯಾತ್ಮಿಕ ಸಾಧನೆಗೆ ಅತ್ಯಂತ ಶ್ರೇಷ್ಠವಾದ ಕಾಲವಾಗಿದ್ದು, ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿವಿಧ ವೈದಿಕ ವಿಧಿವಿಧಾನಗಳು ಜರುಗಲಿವೆ.
ಮುಖ್ಯವಾಗಿ ವಿವಿಧ ಧಾರ್ಮಿಕ ಹೋಮ, ಹವನಾದಿ ವೈದಿಕ ಕಾರ್ಯಕ್ರಮಗಳು, ತುಪ್ಪದ ನಂದಾದೀಪ ಪ್ರಜ್ವಲನೆ ಹಾಗೂ ನಿರಂತರವಾಗಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಭಜನಾ ಸಂಕೀರ್ತನೆಗಳು ನೆರವೇರಲಿವೆ. ಈ ಕಾರ್ಯಕ್ರಮಗಳ ಮೂಲಕ ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.
ದೇವಸ್ಥಾನಕ್ಕೆ ಆಗಮಿಸುವ ಸಕಲ ಭಕ್ತಾದಿಗಳಿಗಾಗಿ ಪ್ರತಿದಿನ ಅನ್ನದಾನ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳ ವ್ಯವಸ್ಥೆ ಮಾಡಲಾಗಿದೆ. ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಎಲ್ಲಾ ಭಗವದ್ಭಕ್ತರು ಈ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶ್ರೀ ವಿಠೋಬ ರುಕುಮಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ವಿನಂತಿಸಿದ್ದಾರೆ.
“ಪುರುಷೋತ್ತಮ ಮಾಸವು ನಮ್ಮ ಅಂತರಂಗವನ್ನು ಶುದ್ಧೀಕರಿಸುವ ಪವಿತ್ರ ಕಾಲ. ಶ್ರೀ ವಿಠೋಬ ರುಕುಮಾಯಿ ದೇವಸ್ಥಾನದಲ್ಲಿ ನಡೆಯುವ ಈ ಧರ್ಮ ಕಾರ್ಯಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಭಕ್ತಿಯನ್ನು ಬೆಳೆಸಲಿ. ಸತ್ಕರ್ಮ ಮತ್ತು ನಾಮಸ್ಮರಣೆಯ ಮೂಲಕ ಜೀವನದಲ್ಲಿ ಶಾಂತಿ ಕಾಣೋಣ.”
ಲೋಕಾಃ ಸಮಸ್ತಾಃ ಸುಖಿನೋ ಭವಂತು.

