ಉದ್ಯೋಗಸ್ಥ ಅಮ್ಮಂದಿರ ಮಗುವನ್ನು ನೋಡಿಕೊಳ್ಳುವ ಸಮಸ್ಯೆಗೆ ಮುಕ್ತಿ ಕೋರಲು ಮೊಬೈಲ್ ಕ್ರೆಷೆಸ್‌ ನಿಂದ ಕೇರ್‌ಪ್ರೀನಿಯರ್ ಕೇಂದ್ರ ಉದ್ಘಾಟನೆ

0
35

ಬೆಂಗಳೂರು: ಭಾರತದ ನಗರ ಪ್ರದೇಶಗಳಲ್ಲಿ ಕೆಲಸ ಮಾಡುವ ತಾಯಂದಿರು ಎದುರಿಸುತ್ತಿರುವ ಮಕ್ಕಳ ಆರೈಕೆಯ ಸಮಸ್ಯೆಗೆ ಪರಿಹಾರ ನೀಡಲು ಮತ್ತು ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಲ್ಪಿಸಲು ಮೊಬೈಲ್ ಕ್ರೆಷೆಸ್ ಸಂಸ್ಥೆಯು ವಿನೂತನ ಹೆಜ್ಜೆ ಇರಿಸಿದೆ. ಇ ನಿಟ್ಟಿನಲ್ಲಿ ಕೇರ್‌ಪ್ರೀನಿಯರ್ ಎಂಬ ಹೊಸ ಮಾದರಿಯನ್ನು ಲೋಕಾರ್ಪಣೆ ಮಾಡಿದ್ದು, ಆರಂಭಿಕ ಹೆಜ್ಜೆಯಾಗಿ ಬೆಂಗಳೂರಿನ ಯಲಹಂಕದ ಕೋಟೆ ಬೀದಿಯಲ್ಲಿ ನೂತನ ಆಲೋಕ ಕ್ರೆಷೆ ಕೇಂದ್ರವನ್ನು ಆರಂಭಿಸಿದೆ. ಈ ವಿಶಿಷ್ಟ ಕೇಂದ್ರವನ್ನು ಯಲಹಂಕ ಶಾಸಕರಾದ ಶ್ರೀ ಎಸ್.ಆರ್. ವಿಶ್ವನಾಥ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯಲಹಂಕ ಶಾಸಕರಾದ ಶ್ರೀ ಎಸ್.ಆರ್. ವಿಶ್ವನಾಥ್ ಅವರು, “ಮೂರು ವರ್ಷದೊಳಗಿನ ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೆಂಗಳೂರಿನ ಮೊದಲ ಕೇರ್‌ಪ್ರೀನಿಯರ್ ಶಿಶುಪಾಲನಾ ಕೇಂದ್ರ ಇದಾಗಿದೆ. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಎಂಟು ಗಂಟೆಗಳ ಕಾಲ ತಮ್ಮ ಮಕ್ಕಳನ್ನು ಸುರಕ್ಷಿತವಾಗಿರಿಸಲು ಈ ಕೇಂದ್ರ ನೆರವಾಗಲಿದೆ. ಮಕ್ಕಳಿಗೆ ಉತ್ತಮ ಆರಂಭಿಕ ಶಿಕ್ಷಣ ಮತ್ತು ಪೋಷಣೆ ಸಿಗುವುದರಿಂದ ತಾಯಂದಿರು ನಿಶ್ಚಿಂತೆಯಿಂದ ಕೆಲಸಕ್ಕೆ ಹೋಗಬಹುದು,” ಎಂದು ಹರ್ಷ ವ್ಯಕ್ತಪಡಿಸಿದರು.

ಈ ಕೇಂದ್ರವು ಕೇವಲ ಶಿಶುಪಾಲನಾ ಕೇಂದ್ರವಾಗಿರದೆ, ಸ್ಥಳೀಯ ಮಹಿಳೆಯರನ್ನೇ ಉದ್ಯಮಿಗಳನ್ನಾಗಿ (ಕೇರ್‌ಪ್ರೀನಿಯರ್) ರೂಪಿಸುವ ಯೋಜನೆಯಾಗಿದೆ. ಇಲ್ಲಿ ಆ ಭಾಗದ ಮಹಿಳೆಯರೇ ಮಕ್ಕಳ ಆರೈಕೆಯ ಜವಾಬ್ದಾರಿ ಹೊರಲಿದ್ದು, ಅದಕ್ಕಾಗಿ ಅವರಿಗೆ ವೇತನವನ್ನೂ ನೀಡಲಾಗುತ್ತದೆ. ಸರ್ಕಾರ, ನಾಗರಿಕ ಸಮಾಜ ಹಾಗೂ ಖಾಸಗಿ ವಲಯಗಳನ್ನು ಒಗ್ಗೂಡಿಸಿ ಕೇರ್ ಸರ್ಕಲ್‌ ಗಳನ್ನು ನಿರ್ಮಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಈ ಕೇಂದ್ರದ ಜವಾಬ್ದಾರಿಯನ್ನು ಈಶ್ವರಿ ಕಲ್ಪ ಮಹಿಳಾ ಸ್ವಸಹಾಯ ಸಂಘದ ಸದಸ್ಯರಾದ ಚೈತ್ರಾ ಬಿ.ಎಸ್. ಅವರು ವಹಿಸಿಕೊಂಡಿದ್ದಾರೆ. ಇವರಿಗೆ ಮೊಬೈಲ್ ಕ್ರೆಷೆಸ್ ಸಂಸ್ಥೆಯು ಬಾಲ್ಯದ ಆರಂಭಿಕ ಹಂತದ ಬೆಳವಣಿಗೆ ಕುರಿತು ವಿಶೇಷ ತರಬೇತಿ ನೀಡಿದೆ. ಚೈತ್ರಾ ಅವರು ಈ ಕೇಂದ್ರವನ್ನು ತಮ್ಮದೇ ಆದ ಸ್ವತಂತ್ರ ಉದ್ಯಮವಾಗಿ ನಡೆಸುತ್ತಿದ್ದು, ಪ್ರತಿ ತಿಂಗಳು ಸುಮಾರು ₹23,000 ಆದಾಯ ಗಳಿಸುತ್ತಿದ್ದಾರೆ. ಇದು ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತ ಗಮನಾರ್ಹವಾದ ವೇತನವಾಗಿದೆ.

ಭಾರತದ ನಗರ ಪ್ರದೇಶಗಳಲ್ಲಿ ಶಿಶುಪಾಲನಾ ಸೌಲಭ್ಯ ವಿಸ್ತರಣೆ ಕುರಿತ ಯು ಎನ್ ಡಿ ಪಿ -ಡಾಲ್ಬರ್ಗ್ ವರದಿ ಪ್ರಕಾರ, ನಗರ ಪ್ರದೇಶದ ಕಡಿಮೆ ಆದಾಯದ ಕುಟುಂಬಗಳ ಸುಮಾರು 1 ಕೋಟಿ ಮಹಿಳೆಯರಿಗೆ ಇಂದು ಗುಣಮಟ್ಟದ ಶಿಶುಪಾಲನಾ ಸೌಲಭ್ಯದ ತುರ್ತು ಅಗತ್ಯವಿದೆ. ಮಹಿಳೆಯರು ಪ್ರತಿದಿನ ಸುಮಾರು 137 ರಿಂದ 142 ನಿಮಿಷಗಳನ್ನು ಮಕ್ಕಳ ಆರೈಕೆಗಾಗಿ ಮೀಸಲಿಡುತ್ತಿದ್ದಾರೆ. ಇದರಿಂದಾಗಿ ಅವರು ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 2047ರ ವೇಳೆಗೆ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯನ್ನು 70% ಕ್ಕೆ ಹೆಚ್ಚಿಸಬೇಕೆಂದರೆ, ಭಾರತಕ್ಕೆ ಸುಮಾರು 10 ಲಕ್ಷ ಶಿಶುಪಾಲನಾ ಕೇಂದ್ರಗಳ ಅಗತ್ಯವಿದೆ. ಗುಣಮಟ್ಟದ ಪೂರ್ಣಾವಧಿ ಶಿಶುಪಾಲನಾ ಸೌಲಭ್ಯ ದೊರೆತಲ್ಲಿ, ಮಹಿಳಾ ಉದ್ಯೋಗದ ಪ್ರಮಾಣವು 5% ರಿಂದ 47% ರಷ್ಟು ಹೆಚ್ಚಾಗಬಹುದು ಎಂದು ಸಂಶೋಧನೆಗಳು ತಿಳಿಸಿವೆ.

ಅದಕ್ಕೆ ಪೂರಕವಾಗಿ ಆಲೋಕ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಕೇಂದ್ರವನ್ನು ಸರ್ಕಾರಿ ಸಬ್ಸಿಡಿಗಳು ಮತ್ತು ಮೂಲಸೌಕರ್ಯಗಳ ಮೂಲಕ ಸಾಮಾನ್ಯ ಜನರಿಗೂ ಕೈಗೆಟಕುವ ದರದಲ್ಲಿ ಸೇವೆ ಒದಗಿಸಲಾಗುತ್ತದೆ. ಉದ್ಯೋಗಿಗಳ ತರಬೇತಿ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯ ಬಳಕೆ ಮಾಡಲಾಗುವುದು. ಬಳಕೆದಾರರಿಂದ ಪಡೆಯುವ ಶುಲ್ಕದ ಮೂಲಕ ನಿರಂತರ ಆದಾಯ ಮತ್ತು ಕೇಂದ್ರದ ದೀರ್ಘಕಾಲೀನ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲಾಗುವುದು.

ಈ ಕುರಿತು ಮೊಬೈಲ್ ಕ್ರೆಷೆಸ್‌ ನ ನೀತಿ ಮತ್ತು ಪಾಲುದಾರಿಕೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕಿ ಚಿರಶ್ರೀ ಘೋಷ್ ಅವರು, “ನಾವು ಎಲ್ಲವನ್ನೂ ಸರ್ಕಾರವೇ ಭರಿಸಲಿ ಎಂದು ಕೇಳುತ್ತಿಲ್ಲ, ಅಥವಾ ದಾನಿಗಳ ನೆರವಿನಿಂದಲೇ ಶಾಶ್ವತವಾಗಿ ನಡೆಸಲು ಬಯಸುತ್ತಿಲ್ಲ” ಎಂದು ತಿಳಿಸಿದ್ದಾರೆ. ಈ ಕೇಂದ್ರವು 6 ತಿಂಗಳಿನಿಂದ 6 ವರ್ಷದೊಳಗಿನ ಮಕ್ಕಳಿಗೆ ಆಶ್ರಯ ತಾಣವಾಗಿದ್ದು, ಇಲ್ಲಿ ಪ್ರತಿದಿನ ಮೂರು ಬಾರಿ ಬಿಸಿ ಮತ್ತು ಪೌಷ್ಟಿಕಯುಕ್ತ ಆಹಾರದ ವ್ಯವಸ್ಥೆ ಲಭ್ಯವಿದೆ. ಮಕ್ಕಳ ಬೆಳವಣಿಗೆಯ ಬಗ್ಗೆ ನಿಯಮಿತವಾಗಿ ನಿಗಾ ವಹಿಸಲಾಗುವುದು. ತರಬೇತಿ ಪಡೆದ ಸ್ಥಳೀಯ ಆರೈಕೆದಾರರಿಂದ ಮಕ್ಕಳ ಸ್ನೇಹಿ ಪರಿಸರದಲ್ಲಿ ನೋಡಿಕೊಳ್ಳಲಾಗುವುದು. ವಿಶೇಷವಾಗಿ ಕಡಿಮೆ ಆದಾಯವಿರುವ ಸಮುದಾಯದ ದುಡಿಯುವ ಮಹಿಳೆಯರಿಗಾಗಿ ದಿನಕ್ಕೆ ಎಂಟು ಗಂಟೆಗಳ ಕಾಲ ನಂಬಿಕಾರ್ಹ ಶಿಶುಪಾಲನಾ ಸೌಲಭ್ಯ ಇಲ್ಲಿ ಲಭ್ಯ.

ನಗರ ಪ್ರದೇಶದ ಶ್ರಮಿಕ ವರ್ಗದ ಮಹಿಳೆಯರಿಗೆ ನೆಮ್ಮದಿಯಿಂದ ಕೆಲಸ ಮಾಡಲು ಮತ್ತು ಅವರ ಮಕ್ಕಳಿಗೆ ಸುರಕ್ಷಿತ ಭವಿಷ್ಯ ಕಲ್ಪಿಸಲು ಈ ಆಲೋಕ ಕೇಂದ್ರವು ಒಂದು ಆಶಾಕಿರಣವಾಗಿದೆ.

LEAVE A REPLY

Please enter your comment!
Please enter your name here