ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡದಂಗಡಿ ಪರಿಸರದ ಪಾಳುಬಿದ್ದ ಮನೆಯೊಂದರಲ್ಲಿ ಕೊಳೆತ ಸ್ಥಿತಿಯ ಅನಾಥ ಶವ ಪತ್ತೆಯಾಗಿರುವ ಘಟನೆ ಸಂಭವಿಸಿದೆ.

ಶವವು ಸುಮಾರು ಮೂರ್ನಾಲ್ಕು ದಿನಗಳ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಸಂಪೂರ್ಣ ಕೊಳೆತು ದುರ್ವಾಸನೆ ಬೀರುತ್ತಿತ್ತು ಎಂದು ತಿಳಿದುಬಂದಿದೆ.
ನೆರೆಮನೆಯವರೊಬ್ಬರ ನಾಯಿ ಕಾಣೆಯಾಗಿದ್ದ ಹಿನ್ನೆಲೆ, ಅದೇ ನಾಯಿ ಸತ್ತು ದುರ್ವಾಸನೆ ಬರುತ್ತಿರಬಹುದೆಂದು ಹುಡುಕಾಡುತ್ತಾ ಹೋದ ವೇಳೆ ಪಾಳು ಮನೆಯಲ್ಲಿ ಶವ ಪತ್ತೆಯಾಗಿದೆ.
ಸ್ಥಳೀಯ ಮಾಹಿತಿ ಪ್ರಕಾರ, ಕೇರಳ ಮೂಲದ ‘ಚೇಟ’ ಎಂಬಾತ ಇದೇ ಪರಿಸರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಸಂಜೆ ವೇಳೆ ಮದ್ಯಪಾನ ಮಾಡಿ ಅಲ್ಲಲ್ಲಿ ಮಲಗುತ್ತಿದ್ದ ಎನ್ನಲಾಗಿದೆ. ಪತ್ತೆಯಾದ ಶವ ಆತನದ್ದೇ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸ್ ಠಾಣೆಯ ಎಸ್.ಐ. ಪ್ರತಿಭಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

