ಮೂಡುಬಿದಿರೆ: ಬಂಟರ ಸಂಘ ಕಡಂದಲೆ–ಪಾಲಡ್ಕದ ಸಹಯೋಗದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರು ಸಾಂಪ್ರದಾಯಿಕ ಬಗೆಬಗೆಯ ಖಾದ್ಯಗಳನ್ನು ಸಿದ್ಧಪಡಿಸಿ ಭೋಜನ ವ್ಯವಸ್ಥೆ ಮಾಡಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುವ ಮೂಲಕ ಶಿಕ್ಷಣಕ್ಕೆ ಉತ್ತೇಜನ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೆ. ಸುದರ್ಶನ ಶೆಟ್ಟಿ, ಬಡ ಕುಟುಂಬಗಳ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಪ್ರೋತ್ಸಾಹದಿಂದ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಸುನಿತಾ ಸುಚರಿತ ಶೆಟ್ಟಿ ಮಾತನಾಡಿ, ಆಟಿಡೊಂಜಿ ದಿನವು ತುಳುನಾಡಿನ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಲ್ಲಿ ಪ್ರಮುಖ ಸ್ಥಾನ ಹೊಂದಿದೆ. ಆಟಿ ತಿಂಗಳಲ್ಲಿ ಆಚರಿಸಲಾಗುವ ಈ ದಿನದಂದು ಪೂರ್ವಜರ ಸಂಪ್ರದಾಯ, ಗ್ರಾಮೀಣ ಕಲೆ, ಜನಪದ ಆಟಗಳು, ಸ್ಥಳೀಯ ಆಹಾರ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇಂದಿನ ಯುವ ಪೀಳಿಗೆಗೆ ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಮಹತ್ವದ ಆಚರಣೆಯಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ, ಪ್ರೇಮ ಶೆಟ್ಟಿ, ನೀರಜಾಕ್ಷಿ ಶೆಟ್ಟಿ, ಜಯಲಕ್ಷ್ಮಿ ಶೆಟ್ಟಿ, ಸಂಸ್ಕೃತಿ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಖಜಾಂಜಿ ವಿವೇಕ್ ಶೆಟ್ಟಿ, ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಆದರ್ಶ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಯಶ್ರೀ ಶೆಟ್ಟಿ ನಿರೂಪಿಸಿದರು. ಸಂಘದ ಸದಸ್ಯರು ಹಾಗೂ ಸ್ಥಳೀಯರು ಉತ್ಸಾಹದಿಂದ ಭಾಗವಹಿಸಿ ಆಟಿಡೊಂಜಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು

