ಯೂಟ್ಯೂಬ್ ನೋಡಿ ಪ್ರಯೋಗ ಮಾಡದಿರಿ, ಪ್ರತ್ಯಕ್ಷ ನೋಡಿ ತೋಟಗಾರಿಕೆ ನಡೆಸಿ
ಮೂಡುಬಿದಿರೆ : . ಅಡಿಕೆಗಿಂತ ಹೆಚ್ಚು ವೆಚ್ಚ, ಆರೈಕೆ ಕ್ರಮ ಅನುಸರಿಸಬೇಕಾಗಿರುವ ರಂಬುಟಾನ್ ಬೆಳೆಯನ್ನು ಯೂಟ್ಯೂಬ್ ನೋಡಿ ಮಾಡಲು ಹೊರಡದಿರಿ, ಒಳ್ಳೆಯ ತೋಟಗಳನ್ನು ಪ್ರತ್ಯಕ್ಷ ವೀಕ್ಷಿಸಿ, ವಿಜ್ನಾನಿಗಳ ಸಹಿತ ಅನುಭವಿಗಳ ಮಾರ್ಗದರ್ಶನದೊಂದಿಗೆ ರಂಬುಟಾನ್ ಬೆಳೆಯಿರಿ ಎಂದು ಬ್ರಹ್ಮಾವರ ಕೃಷಿ ವಿಜ್ನಾನ ಕೇಂದ್ರದ ವಿಜ್ನಾನಿ ಡಾ. ಚೈತನ್ಯ ಹೇಳಿದರು.
ಇಲ್ಲಿನ ಸಮಾಜ ಮಂದಿರದಲ್ಲಿ ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದಲ್ಲಿ ಶನಿವಾರ ಏರ್ಪಡಿಸಿದ್ದ ತೋಟಗಾರಿಕೆ ಬೆಳೆಗಳಲ್ಲಿರಂಬೂಟಾನ್ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿಸಲು ಬೀಳುವ ಜಾಗದಲ್ಲಿ, ವಿಶೇಷವಾಗಿ ಇಳಿಜಾರು ಪ್ರದೇಶದಲ್ಲಿ, ಮಳೆಗಾಲ ಹೊರತುಪಡಿಸಿ ಯಥೇಚ್ಛ ನೀರು, ಸೂಚಿತ ಗೊಬ್ಬರ, ಜೀವಾಣು ಮತ್ತಿತರ ಅವಶ್ಯಕ ಒಳಸುರಿಗಳ ಒದಗಣೆ, ಸಕಾಲದಲ್ಲಿ ಪ್ರೂನಿಂಗ್ ಮತ್ತಿತರ ಕ್ರಮಗಳನ್ನು ಅನುಸರಿಸುವ ಮೂಲಕ ಕರಾವಳಿ ಭಾಗದಲ್ಲಿ ರಂಬೂಟಾನ್ ನಂಥ ಹಣ್ಣಿನ ತೋಟಗಾರಿಕೆ ನಡೆಸಬಹುದಾಗಿದೆ ಎಂದರು.

ಒಳ್ಳೆಯ ತಳಿಗಳು, ನಾಟಿ, ಪೋಷಣೆ, ನಿರ್ವಹಣೆಯ ಕ್ರಮಗಳ ಬಗ್ಗೆ ಸವಿವರವಾಗಿ ಅವರು ಮಾಹಿತಿ ನೀಡಿದರು.
ಮಂಗಳೂರಿನ ಸಹಾಯಕ ತೋಟಗಾರಿಕೆ ಅಧಿಕಾರಿ ಮಹೇಶ್ ಎನ್. ಅವರು ತೋಟಗಾರಿಕೆ ಬೆಳೆಗಳಲ್ಲಿ ಮಿತವ್ಯಯ ನೀರಾವರಿ ಪದ್ದತಿ ಬಗ್ಗೆ ಮಾಹಿತಿ ನೀಡಿದರು. ಮಳೆಗಾಲ ಹೊರತು ಪಡಿಸಿ ಅಡಿಕೆಗೆ 20 ಲೀ., ತೆಂಗಿಗೆ 60-65 ಲೀ. ನೀರು ಒದಗಿಸಬೇಕಾಗಿಸಬೇಕಾದುದನ್ನು ತಿಳಿಸಿದ ಅವರು ಒಂದೇ ಮೂಲದಿಂದ ನೀರು ಒದಗಿಸುವಾಗ ಸೂಕ್ತ ಪ್ರಮಾಣದಲ್ಲಿ ನೀರು ಲಭ್ಯವಾಗುವ ಹಾಗೆ ಯಾಂತ್ರೀಕತೆಯನ್ನು ಹೊಂದಿಸಿಕೊಳ್ಳಬೇಕಾಗಿದೆ ಎಂಬಿತ್ಯಾದಿ ವಿಷಯಗಳನ್ನು ವಿಷದೀಕರಿಸಿದರು.
ಕಾರ್ಯಕ್ರಮ ಪ್ರಾಯೋಜಿಸಿದ ಜವುಳಿ ಉದ್ಯಮಿ, ಕೃಷಿಕ ಪ್ರಭಾಚಂದ್ರ ಜೈನ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಹಳ್ಳಿಯ ಜೀವನ ಕ್ರಮದಲ್ಲಿ, ಕೃಷಿಯಲ್ಲಿಕಷ್ಟವಿದ್ದರೂ ನೆಮ್ಮದಿ ಇದೆ. ಆದರೆ ಆಧುನಿಕ ಜೀವನ ಶೈಲಿಗೆ ಹೊಂದಿಕೊಂಡವರ ಮುಂದಿನ ತಲೆಮಾರು ಕೃಷಿಯನ್ನು ಮುಂದುವರಿಸುವರೇ ಎಂಬುದಕ್ಕೆ ಸಮರ್ಪಕ ಉತ್ತರ ಲಭಿಸುತ್ತಿಲ್ಲ ಎಂದರು.
ಕೇಂದ್ರದ ಅಧ್ಯಕ್ಷ ಅಭಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಇಂದಿರಾ ಶೆಟ್ಟಿ, ಕುಪ್ಪೆಪದವು ಮನೋಹರ ಶೆಟ್ಟಿ, ಜಿನೇಂದ್ರ ಜೈನ್ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು.
ಸೋನ್ಸ್ ಫಾರ್ಮ್ ನ ಸುನಿಲ್ ಸೋನ್ಸ್ ತೆಂಗಿನ ಹಿಂಗಾರದಿಂದ ಆರೋಗ್ಯವರ್ಧಕ ಕಲ್ಪರಸ ತಯಾರಿಸುವ ಜಿಲ್ಲಾ ಮಟ್ಟದ ಸಹಕಾರಿ ಸಂಘಟನೆಯ ಬಗ್ಗೆ ತಿಳಿಸಿದರು. ಆಳ್ವಾಸ್ ರೇಡಿಯೋದ ಆರ್ಜಿತ್ ಜೈನ್ ಕೃಷಿ ಕಾರ್ಯಕ್ರಮ ಪ್ರಸಾರ ಕುರಿತು ಸಹಕಾರ ಬಯಸಿದರು. ಟಾಟಾ ಎಐಜಿ ಅಧಿಕಾರಿಗಳು ಹವಾಮಾನ ಆಧಾರಿತವಾಗಿ ಅಡಿಕೆ, ಕಾಳುಮೆಣಸು ಕೃಷಿಗಳಿಗೆ ಸಂಬಂಧಿಸಿದ ಫಸಲ್ ಬಿಮಾ ಯೋಜನೆ ಕುರಿತು ಮಾಹಿತಿ ನೀಡಿದರು.
ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ ಸ್ವಾಗತಿಸಿದರು. ಕೋಶಾಧಿಕಾರಿ ಲಿಡ್ವಿನ್ ಡಿಕೋಸ್ತ ಸಹಿತ ಪ್ರಮುಖರು ಅತಿಥಿಗಳನ್ನು ಗೌರವಿಸಿದರು. ಮಾಜಿ ಅಧ್ಯಕ್ಷ ಜಿನೇಂದ್ರ ಜೈನ್ ನಿರೂಪಿಸಿ ಕಾರ್ಯದರ್ಶಿ ಹರೀಶ್ ಆರ್. ಕೋಟ್ಯಾನ್ ವಂದಿಸಿದರು.

