ಕನಕದಾಸರ ಸಮಗ್ರ ಅನುವಾದ ಕೃತಿಗಳ ಬಿಡುಗಡೆ

0
20

ಕನಕದಾಸರು ಸಮ ಸಮಾಜವನ್ನು ಪ್ರತಿಪಾದಿಸಿದ ದಾರ್ಶನಿಕ ಕವಿ : ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಗಳೂರು: ‘ಸಂತ ಕವಿ ಕನಕದಾಸರು ತಮ್ಮ ಕಾವ್ಯ ಕೃತಿಗಳ ಮೂಲಕ ಸಮಾಜದ ಅಸಮಾನತೆ, ವರ್ಗ ವೈಷಮ್ಯಗಳನ್ನು ದೂರ ಮಾಡಿ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿದ ಒಬ್ಬ ದಾರ್ಶನಿಕ ಕವಿ. ಅವರು ಸಮ ಸಮಾಜದ ಬಗ್ಗೆ ಇಟ್ಟ ಅಪಾರವಾದ ನಂಬಿಕೆ ಮತ್ತು ಅದಕ್ಕಾಗಿ ತನ್ನ ಭಕ್ತಿಯನ್ನು ಸಾಮಾಜೀಕರಣ ಮಾಡಿದ ವಿಚಾರ ಬಹಳ ಮಹತ್ವದ್ದು’ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ದೇಶದ 14 ಭಾಷೆಗಳಲ್ಲಿ ಅನುವಾದ ಮಾಡಿ ಪ್ರಕಟಿಸಿರುವ ಕನಕದಾಸರ ಎಲ್ಲಾ ಕೃತಿಗಳನ್ನು ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.

‘ಕನ್ನಡಿಗರಿಗೆ ಲಭಿಸಿದ ಕನಕರ ಕಾವ್ಯ ಸಂಪತ್ತು ಇತರ ಹಲವು ಭಾಷೆಗಳಲ್ಲಿ ತರ್ಜುಮೆಗೊಳ್ಳುವ ಮೂಲಕ ಅವರ ಸಮಾನತೆಯ ಸಂದೇಶ ವಿಶ್ವವ್ಯಾಪಿಯಾಗಿ ಮಾನವ ಜನಾಂಗವನ್ನು ಪರಸ್ಪರ ಬೆಸೆಯುವಂತಾಗಲಿ’ ಎಂದು ಮುಖ್ಯಮಂತ್ರಿಗಳು ಹಾರೈಸಿದರು. ಬೆಂಗಳೂರಿನ ಮಲ್ಲತಹಳ್ಳಿ ಸಾಂಸ್ಕೃತಿಕ ಸಮುಚ್ಚಯ ಕಲಾಗ್ರಾಮದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನೂತನವಾಗಿ ನಿರ್ಮಿಸಿದ ಕನಕ ಶಿಲ್ಪ ವನವನ್ನು ಅನಾವರಣ ಮಾಡಿದ ಬಳಿಕ ಸಭಾಂಗಣಕ್ಕೆ ಬಂದ ಮುಖ್ಯಮಂತ್ರಿಗಳು 14 ಭಾಷೆಗಳಲ್ಲಿ ತಲಾ ಮೂರು ಸಂಪುಟಗಳಾಗಿ ಪ್ರಕಟಗೊಂಡ ಕೃತಿಗಳನ್ನು ಲೋಕಾರ್ಪಣೆ ಗೊಳಿಸಿದರು. ಶಾಸಕ ಮುನಿರತ್ನ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಚಿವ ಶಿವರಾಜ್ ತಂಗಡಗಿ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಜೆ.ಮಂಜುನಾಥ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಂಸ್ಕೃತಿ ಚಿಂತಕರಾದ ಬಂಜಗೆರೆ ಜಯಪ್ರಕಾಶ್ ಕೃತಿಗಳ ಕುರಿತು ಮಾತನಾಡಿದರು.

ಕರಾವಳಿ ಕರ್ನಾಟಕದ ಪ್ರಮುಖ ಭಾಷೆಗಳಾದ ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆಗಳಲ್ಲೂ ಕನಕದಾಸರ ಸಮಗ್ರ ಕೃತಿಗಳು ಅನುವಾದವಾಗಿದ್ದು ತುಳು ಆವೃತ್ತಿಯ ಸಂಪಾದಕ ಪ್ರೊ| ಎ.ವಿ. ನಾವಡ, ಅನುವಾಕರಾದ ಡಾ. ವಸಂತ ಕುಮಾರ್ ಪೆರ್ಲ , ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಪ್ರೊ.ಟಿ ಎ ಎನ್ ಖಂಡಿಗೆ, ಮುದ್ದು ಮೂಡುಬೆಳ್ಳೆ,ಆತ್ರಾಡಿ ಅಮೃತ ಶೆಟ್ಟಿ ಅಲ್ಲದೆ ಇತರ ಭಾಷಾಂತರಕಾರರು, ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರು , ಹಿರಿಯ ಸಾಹಿತಿ – ವಿದ್ವಾಂಸರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಸ್ಯ ಕಾರ್ಯದರ್ಶಿ ಕರಿಯಪ್ಪ ಎನ್. ಸ್ವಾಗತಿಸಿ, ಸಮನ್ವಯಾಧಿಕಾರಿ ಭಾರತಿ ಹೆಗಡೆ ವಂದಿಸಿದರು.

LEAVE A REPLY

Please enter your comment!
Please enter your name here