ಚಿನ್ನಕ್ಕಾಗಿ ಯುವತಿ ಕೊಲೆ ಯತ್ನ ; ನೆರೆಮನೆ ಮಹಿಳೆ ಬಂಧನ

0
92


ಉಡುಪಿ: ಮಣಿಪಾಲದ ಶಾಂತಿನಗರದಲ್ಲಿ ಸುದರ್ಶನ ಕಾಂಪ್ಲೆಕ್ಸ್​ನ ಬಾಡಿಗೆ ಕೋಣೆಯೊಂದರಲ್ಲಿ ವಾಸವಾಗಿದ್ದ ಯುವತಿ ಕೊಲೆಯತ್ನ ಪ್ರಕರಣ ಭೇದಿಸಿರುವ ಪೊಲೀಸರು ನೆರೆಮನೆಯ ಮಹಿಳೆಯನ್ನು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾವಿಕೇರಿ ಗ್ರಾಮದ ನಿವಾಸಿ ಸುಷ್ಮಾ ಅಣ್ಣಪ್ಪ ನಾಯ್ಕ್​ (31) ಬಂಧಿತ ಆರೋಪಿತೆ. ಮಣಿಪಾಲದ ಕೈಗಾರಿಕಾ ಪ್ರದೇಶದಲ್ಲಿರುವ ಪ್ರೆಸ್​ನಲ್ಲಿ ಬೈಂಡಿಂಗ್​ ಕೆಲಸ ಮಾಡುತ್ತಿದ್ದ ಯೋಗಿತಾ ಹಲ್ಲೆಗೊಳಗಾದ ದುರ್ದೈವಿ.
ಪ್ರಕರಣ ವಿವರ
ಮೇ 12ರಂದು ರಾತ್ರಿ ಯೋಗಿತಾ ಕೋಣೆಯಲ್ಲಿ ಒಬ್ಬಳೇ ಇದ್ದದ್ದನ್ನು ಗಮನಿಸಿದ ಪಕ್ಕದ ರೂಮಿನ ಸುಷ್ಮಾ ಆಕೆಯ ಕೋಣೆಗೆ ಬಂದು ಜೊತೆಯಲ್ಲಿ ಮಲಗಿದ್ದಾಳೆ. ಬೆಳಗಿನ ಜಾವ ಸುಮಾರು 4:30ರ ವೇಳೆಗೆ ಯೋಗಿತಾ ಗಾಢ ನಿದ್ರೆಯಲ್ಲಿದ್ದಾಗ ಮೊದಲೇ ತಂದಿಟ್ಟುಕೊಂಡಿದ್ದ ಕಾಂಕ್ರೀಟ್​ ಹಾಲೋ ಬ್ಲಾಕ್​ ಕಲ್ಲನ್ನು ಆಕೆಯ ತಲೆಯ ಮೇಲೆ ಪದೇ ಪದೇ ಎತ್ತಿ ಹಾಕಿ ಕೊಲೆಗೆ ಯತ್ನಿಸಿದ್ದು, ಬಳಿಕ ಆಕೆಯ ಕುತ್ತಿಗೆಯಲ್ಲಿದ್ದ 8 ಗ್ರಾಂ ತೂಕದ ಚಿನ್ನದ ಸರ ಹಾಗೂ ಕಿವಿಯ ಬೆಂಡೋಲೆಯನ್ನು ದೋಚಿ, ತನ್ನ ಕೋಣೆಗೆ ಮರಳಿದ್ದಳು. ಮರುದಿನ ಬೆಳಿಗ್ಗೆ 7:15 ರ ಸುಮಾರಿಗೆ ಯೋಗಿತಾಳ ರೂಮ್​ಮೇಟ್​ಗಳು ಕೆಲಸ ಮುಗಿಸಿ ವಾಪಸಾದಾಗ ಬಾಗಿಲು ಅರೆತೆರೆದಿತ್ತು. ಒಳಗೆ ಹೋಗಿ ನೋಡಿದಾಗ ಯೋಗಿತಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣ ಆಕೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆಕೆ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಕುರಿತು ಮೇಘಾ ಗೌಡ ನೀಡಿದ ದೂರಿನನ್ವಯ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಪ್ಪೊಪ್ಪಿಕೊಂಡ ಆರೋಪಿ
ಕಳೆದ 3 ವರ್ಷಗಳಿಂದ ಮನೆಗೆ ಹಣ ಕಳುಹಿಸಲು ಸಾಧ್ಯವಾಗಿರಲಿಲ್ಲ. ಮನೆಯವರು ಹಣಕ್ಕಾಗಿ ಪೀಡಿಸುತ್ತಿದ್ದರು ಹಾಗೂ ಕೆಲಸ ಬಿಟ್ಟು ಊರಿಗೆ ಬರುವಂತೆ ಒತ್ತಾಯಿಸುತ್ತಿದ್ದರು. ಹೇಗಾದರೂ ಮಾಡಿ ಹಣ ಹೊಂದಿಸುವ ಅನಿವಾರ್ಯತೆಯಿಂದ ಈ ಕೃತ್ಯ ಎಸಗಿದೆ ಎಂದು ಬಂಧಿತ ಸುಷ್ಮಾ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ. ಬಂಧಿತಳಿಂದ ದೋಚಲಾಗಿದ್ದ ಚಿನ್ನದ ಸರ ಹಾಗೂ ಬೆಂಡೋಲೆಗಳನ್ನು ಪೊಲೀಸರು ಸ್ವಾಧಿನಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here