ಪ್ರಸಾದದ ನೆಪದಲ್ಲಿ ಮಹಿಳೆಗೆ ಮತ್ತು ಬರುವ ಪಾನೀಯ – 10 ಲಕ್ಷ ರೂ. ಚಿನ್ನಾಭರಣ ಕಳವು..!

0
80

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ವೃದ್ಧೆಗೆ ಮತ್ತು ಬರುವ ಲಡ್ಡು ಹಾಗೂ ಪಾನೀಯ ನೀಡಿ ಅಸ್ವಸ್ಥರನ್ನಾಗಿಸಿ ಸುಮಾರು 10ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ. ಈ ಕುರಿತು ಧರ್ಮಸ್ಥಳ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ನಗರದ ಜೆಪಿ ನಗರ ನಿವಾಸಿ ಪ್ರೇಮಾ (70) ಚಿನ್ನಾಭರಣ ಕಳೆದುಕೊಂಡ ಮಹಿಳೆ. ಮೇ 23ರಂದು ಬೆಂಗಳೂರಿನಿಂದ ಬ್ರಹ್ಮಾವರದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ಅವರು, ಮೇ 25ರಂದು ಮಧ್ಯಾಹ್ನ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ದರು.

ದೇವರ ದರ್ಶನ ಮುಗಿಸಿ ರಾತ್ರಿ ಸುಮಾರು 9-45ರ ವೇಳೆಗೆ ಊರಿಗೆ ಮರಳಲು ದೇವಾಲಯದ ಮುಖ್ಯದ್ವಾರದ ಮುಂಭಾಗದ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ವೇಳೆ ಪಕ್ಕದಲ್ಲೇ ಕುಳಿತಿದ್ದ ಅಪರಿಚಿತ ವ್ಯಕ್ತಿ ಮಾತುಕತೆ ಆರಂಭಿಸಿದ್ದಾನೆ. ತಾನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸಿಕೊಂಡು ಬಂದಿರುವುದಾಗಿ ಹೇಳಿ ಲಡ್ಡು ಪ್ರಸಾದ ನೀಡಿದ್ದಾನೆ. ಬಳಿಕ ತನ್ನ ಬಳಿ ಇದ್ದ ಪಾನೀಯವನ್ನು ಕುಡಿಯುವಂತೆ ಒತ್ತಾಯಿಸಿದ್ದಾನೆ.

ಪ್ರೇಮಾ ಅವರು ಸ್ವಲ್ಪ ಪಾನೀಯ ಸೇವಿಸಿದ ಬಳಿಕ ಅಸ್ವಸ್ಥಗೊಂಡಿದ್ದಾರೆ. ಬಳಿಕ ದೇವಾಲಯದ ಮಹಾದ್ವಾರದ ಬಳಿ ಇರುವ ಕಟ್ಟೆಯ ಸಮೀಪ ಅವರನ್ನು ಕೂರಿಸಿ, ಅವರ ಬ್ಯಾಗ್‌ನಲ್ಲಿದ್ದ ಚಿನ್ನಾಭರಣವನ್ನು ಉಪಾಯವಾಗಿ ಕಳವು ಮಾಡಿದ್ದಾನೆ. ನಂತರ ಬಸ್‌ನಲ್ಲಿ ಆಸನ ಇದೆಯೇ ಎಂದು ನೋಡಿ ಬರುತ್ತೇನೆ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ.

ಅಸ್ವಸ್ಥಗೊಂಡಿದ್ದ ಪ್ರೇಮಾ ಅವರನ್ನು ಗಮನಿಸಿದ ಸಾರ್ವಜನಿಕರು ಉಜಿರೆಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರೇಮಾ ಅವರ ಕೊರಳಲ್ಲಿದ್ದ ಚಿನ್ನದ ಸರ, ಪರ್ಸ್‌ನಲ್ಲಿದ್ದ ಬಳೆ, ಮತ್ತೊಂದು ಚಿನ್ನದ ಸರ ಹಾಗೂ 7 ಸಾವಿರ ರೂ. ನಗದು ಸೇರಿ ಒಟ್ಟು ಸುಮಾರು 10ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಹಣ ಕಳವಾಗಿರುವುದಾಗಿ ತಿಳಿದುಬಂದಿದೆ. ಚಿಕಿತ್ಸೆ ಬಳಿಕ ಅವರು ಬೆಂಗಳೂರಿಗೆ ಮರಳಿದ್ದಾರೆ.

ಘಟನೆ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here