ಯು ಎ ಇ.ಯಲ್ಲಿ ಮಕ್ಕಳ ಕಿರು ತಾಳಮದ್ದಳೆ ಅಭಿಯಾನ – “ಪಡಸಾಲೆಯಲ್ಲಿ ಯಕ್ಷಗಾನ ವಾಚಿಕಾರಾಧನೆ” ಉದ್ಘಾಟನೆ

0
10

ಗಲ್ಫ್ ನಾಡಲ್ಲಿ ಯಕ್ಷಗಾನದ ಹೊಸ ಸಂಚಲನ ಆರಂಭ

ಯು ಎ ಇ.,ಯ ಸರ್ವಪ್ರಥಮ ಸಮಗ್ರ ಮತ್ತು ಏಕೈಕ ಯಕ್ಷಗಾನ ಕಲಿಕಾ ಕೇಂದ್ರ ಎಂದು ಮರಳುಗಾಡಿನ ಉದ್ದಕ್ಕೂ ಹೆಸರುವಾಸಿಯಾದ ಯಕ್ಷಗಾನ ಅಭ್ಯಾಸ ಕೇಂದ್ರ ಯು ಎ ಇ. ಇದರ ನೂತನ ಕಾರ್ಯಕ್ರಮ ಸರಣಿಯ ಅಂಗವಾಗಿ ಮಕ್ಕಳ ಕಿರು ತಾಳಮದ್ದಲೆ ಅಭಿಯಾನ – “ಪಡಸಾಲೆಯಲ್ಲಿ ಯಕ್ಷಗಾನ ವಾಚಿಕಾರಾಧನೆ” ಎಂಬ ವಿನೂತನ ಯೋಜನೆಗೆ ಇತ್ತೀಚೆಗೆ ಚಾಲನೆ ನೀಡಲಾಯಿತು.
ಕೇಂದ್ರದ ಸಂಚಾಲಕರಾದ ಶ್ರೀಯುತ ಕೊಟ್ಟಿಂಜ ದಿನೇಶ ಶೆಟ್ಟಿಯವರ ಮನೆ ಪಡಸಾಲೆಯಲ್ಲಿ ದಿನಾಂಕ 2026 ಮೇ ತಿಂಗಳ 30 ನೇ ಶನಿವಾರ ಸಂಜೆ, ಸುಮಂಗಲೆಯರು ದೀಪ ಪ್ರಜ್ವಲನ ಮಾಡುವ ಮೂಲಕ ವಿಧಿವತ್ತಾಗಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಕೇಂದ್ರದ ಹಿರಿಯ ಕಲಾವಿದರಾದ ಶ್ರೀಯುತ ಪ್ರಭಾಕರ ಡಿ.ಸುವರ್ಣರು ಶುಭಾಶಂಸನೆ ಮಾಡಿದರು. ಮತ್ತು ಹಿರಿಯ ಸದಸ್ಯರಾದ ಶ್ರೀಯುತ ಜಯಾನಂದ ಪಕ್ಕಳ, ಶ್ರೀಯುತ ವಾಸು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಕೋರಿದರು. ಕೇಂದ್ರದ ಹೆಚ್ಚಿನ ಸದಸ್ಯ-ಸದಸ್ಯೆಯರು ಕಲಾವಿದರು ತಮ್ಮ ತಮ್ಮ ಸಹಯೋಗದಿಂದ ಕಾರ್ಯಕ್ರಮವನ್ನು ಚೆಂದಗಾಣಿಸಿಕೊಟ್ಟರು. ಎಲ್ಲ ಕಲಾವಿದರನ್ನು ಕೊಟ್ಟಿಂಜ ದಿನೇಶ ಶೆಟ್ಟಿ ದಂಪತಿಗಳು ಶಾಲು ಹಾಕಿ ಗೌರವಿಸಿ, ಸ್ವಾಗತಿಸಿದರು.


ಕೇಂದ್ರದ ನಿರ್ದೇಶಕರಾದ ಶ್ರೀಯುತ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ಕೆಂದ್ರದ ವಿವಿಧ ಚಟುವಟಿಕೆಗಳಾದ ಯಕ್ಷಗಾನ ನಾಟ್ಯ, ಭಾಗವತಿಕೆ, ಚೆಂಡೆ-ಮದ್ದಳೆ, ಕನ್ನಡ ಅಭ್ಯಾಸ ಕೇಂದ್ರ ಇತ್ಯಾದಿ ಎಲ್ಲದರ ಫಲಶ್ರುತಿಯಾದ ಈ ಮಕ್ಕಳ ಕಿರು ತಾಳಮದ್ದಳೆ ಅಭಿಯಾನದ ಪ್ರಮುಖ ಉದ್ದೇಶಗಳಾದ, ಅಭ್ಯಾಸಿಗಳಿಗೆ ವೇದಿಕೆ ನಿರ್ಮಾಣ, ಜೊತೆಗೆ ಯಕ್ಷರಂಗಕ್ಕೆ ಯುಎಇ ಮಕ್ಕಳು ಕೊಡುಗೆ ನೀಡುವಷ್ಟು, ಅಥವ ಮಕ್ಕಳೇ ಕೊಡುಗೆಯಾಗುವಷ್ಟು ಬೆಳೆಯಬೇಕೆಂಬ ಹಂಬಲದಿಂದ ಹಮ್ಮಿಕೊಂಡ ತಳಮಟ್ಟದ ಒಂದು ಕಿರು ಪ್ರಯತ್ನವೇ ಈ ಕಿರು ತಾಳಮದ್ದಳೆ ಅಭಿಯಾನದ ಉದ್ದೇಶವೆಂದು ತಿಳಿಸಿದರು. ಸಂಚಾಲಕರಾದ ಶ್ರೀಯುತ ಕೊಟ್ಟಿಂಜ ದಿನೇಶ ಶೆಟ್ಟಿಯವರು, ಮುಂದಿನ ದಿನಗಳಲ್ಲಿ ಯು ಎ ಇಯ ಉದ್ದಗಲಕ್ಕೆ ಮಕ್ಕಳ ಕಿರು ತಾಳಮದ್ದಳೆ ಅಭಿಯಾನದಡಿ “ಪಡಸಾಲೆಯಲ್ಲಿ ಯಕ್ಷಗಾನ ವಾಚಿಕಾರಾಧನೆ” ಎಂಬ ಯೋಜನೆಯಡಿ ಮತ್ತಷ್ಟು ಮಕ್ಕಳ ತಾಳಮದ್ದಳೆ ಪ್ರದರ್ಶಿಸುವ ಆಲೋಚನೆಯಿಂದ ಈ ಯೋಜನೆ ಸಿದ್ಧಪಡಿಸಿದ್ದೇವೆ; ಯಕ್ಷಗಾನಾಸಕ್ತ ಯು ಎ ಇ.,ಯ ಕಲಾಭಿಮಾನಿ ಪೋಷಕರು ಈ ಯೋಜನೆಯನ್ನು ಪ್ರೋತ್ಸಾಹಿಸುವ ಮೂಲಕ ಯುಎಇ ಯ ಉದ್ದಗಲಕ್ಕೆ ಕನ್ನಡ ಮತ್ತು ಯಕ್ಷಗಾನದ ಕಂಪನ್ನು ಪಸರಿಸುವ ಯೋಜನೆಗೆ ಸಹಕರಿಸಬೇಕೆಂದು ಕೇಳಿಕೊಂಡರು.
ಉದ್ಘಾಟನೆ ಬಳಿಕ ಶ್ರೀಯುತ ಕೊಟ್ಟಿಂಜ ದಿನೇಶ ಶೆಟ್ಟಿಯವರ ಮನೆ ಪಡಸಾಲೆಯಲ್ಲಿ ಮಕ್ಕಳ ಕಿರು ತಾಳಮದ್ದಳೆ ಅಭಿಯಾನದ ಪ್ರಥಮ ಪ್ರದರ್ಶನವಾಗಿ, ಯಕ್ಷಗಾನ ಕವಿ ಹಟ್ಟಿಯಂಗಡಿ ರಾಮಭಟ್ಟ ವಿರಚಿತ “ಸುಭದ್ರಾ ಕಲ್ಯಾಣದ ಶ್ರೀಕೃಷ್ಣ ಸತ್ಯಭಾಮ ಸಂವಾದ ಮತ್ತು ರತಿ ಕಲ್ಯಾಣದ ಶ್ರೀಕೃಷ್ಣ ರುಕ್ಮಿಣಿ ಸಂವಾದ” ದ ಪ್ರದರ್ಶನ ನಡೆಯಿತು. ಕೇಂದ್ರದ ಬಾಲ ಕಲಾವಿದರು ಈ ಆಖ್ಯಾನಗಳನ್ನು ಚೆನ್ನಾಗಿ ನಡೆಸಿಕೊಟ್ಟರು. ಹಿಮ್ಮೇಳದಲ್ಲಿಯೂ ಕೇಂದ್ರದ ಬಾಲ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಭಾಗವತರಾಗಿ ಗುರುಗಳಾದ ಶ್ರೀಮತಿ ಭವ್ಯಶ್ರೀ ಹರೀಶ್ ಕುಲ್ಕುಂದರ ಶಿಷ್ಯೆಯರಾದ ಕುಮಾರಿ ನಯೋಮಿ ಸಾಯಿನಾಥ ಶೆಟ್ಟಿ; ಕುಮಾರಿ ಶ್ರೀಶ ಪ್ರಭಾಕರ ಪೂಜಾರಿ, ಕುಮಾರಿ ಐಶಾನಿ ದೀಪಕ್ ಸುಳ್ಯ ಮತ್ತು ಕುಮಾರಿ ವೈಷ್ಣವಿ ಪದ್ಮಶಾಲಿ ಭಾಗವಹಿಸಿದರೆ ಚೆಂಡೆ – ಮದ್ದಳೆಯಲ್ಲಿ ಗುರುಗಳಾದ ಶ್ರೀ ಸವಿನಯ ನೆಲ್ಲಿತೀರ್ಥರ ಜೊತೆ ಅವರ ಶಿಷ್ಯಂದಿರಾದ, ಕುಮಾರ ಆದಿತ್ಯ ದಿನೇಶ ಶೆಟ್ಟಿ ಕೊಟ್ಟಿಂಜ; ಶ್ರೀ ಹೃಷೀಕೇಶ ಎಸ್. ಮತ್ತು ಕುಮಾರಿ ಐಶಾನಿ ದೀಪಕ್ ಸುಳ್ಯರು ಭಾಗವಹಿಸಿದರು.
ಮುಮ್ಮೇಳದಲ್ಲಿ ಶ್ರೀಕೃಷ್ಣ ಪಾತ್ರಧಾರಿಗಳಾಗಿ :- ಕುಮಾರಿ ಐಶಾನಿ ದೀಪಕ್ ಸುಳ್ಯ ಮತ್ತು ಕುಮಾರಿ ನಯೋಮಿ ಸಾಯಿನಾಥ ಶೆಟ್ಟಿ; ಸತ್ಯಭಾಮೆಯಾಗಿ- ಕುಮಾರಿ ರತಿಕ ರತೀಶ್ ಕಾಡುಮನ; ರುಕ್ಮಿಣಿಯಾಗಿ :- ಕುಮಾರಿ ಶೈವಿ ಪ್ರಭಾಕರ ಪೂಜಾರಿ ಅರ್ಥಧಾರಿಗಳಾಗಿ ರಂಜಿಸಿದರು.
ಉದ್ಘಾಟನಾ ಕಾರ್ಯಕ್ರಮದಂಗವಾಗಿ ಕೇಂದ್ರದ ಹಿರಿ-ಕಿರಿಯ ಕಲಾವಿದರ ಕೂಡುವಿಕೆಯಿಂದ ಕವಿ ಹಟ್ಟಿಯಂಗಡಿ ರಾಮಭಟ್ಟ ವಿರಚಿತ ದ್ರೌಪದೀ ಸ್ವಯಂವರ ಆಧಾರಿತ “ಹಿಡಿಂಬಾ ವಿವಾಹ” ವಿಶೇಷ ತಾಳಮದ್ದಳೆ ಕೂಟ ನಡೆಯಿತು. ಭಾಗವತರಾಗಿ ಶ್ರೀ ಚರಣ್ ರಾಜ್ ಅರ್ಲಪದವು, ಶ್ರೀ ಸಾಗರ್ ಆಚಾರ್ಯ ಬ್ರಹ್ಮಾವರ ಮತ್ತು ಕುಮಾರಿ ಐಶಾನಿ ದೀಪಕ್ ಸುಳ್ಯ ಸೊಗಸಾಗಿ ಪ್ರಸಂಗವನ್ನು ಮನ್ನಡೆಸಿದರೆ, ಚೆಂಡೆ ಮದ್ದಳೆಯಲ್ಲಿ ಶ್ರೀ ಸವಿನಯ ನೆಲ್ಲಿತೀರ್ಥ ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಧರ್ಮರಾಯ- ಶ್ರೀ ಜೀವನ್ ಕ್ರಾಸ್ತ ಪುತ್ತೂರು; ಕುಂತಿ-ಕುಮಾರಿ ಶ್ರೀಶ ಪ್ರಭಾಕರ ಪೂಜಾರಿ; ಭೀಮ- ಶ್ರೀ ರವೀಂದ್ರ ಕುಕ್ಯಾನ್, ಹೊಸಬೆಟ್ಟು; ಅರ್ಜುನ-ಶ್ರೀ ಸಾತ್ವಿಕ್ ಕೊಂಚಾಡಿ; ನಕುಲ-ಕುಮಾರಿ ಯಶಸ್ವಿನಿ ಶೇಖರ್ ಪೂಜಾರಿ; ಸಹದೇವ- ಕುಮಾರಿ ಇಷಿತಾ ಶೇಖರ್ ಪೂಜಾರಿ; ಹಿಡಿಂಬಾಸುರ ಪೂರ್ವ ಭಾಗ -ಶ್ರೀ ಬಾಲಕೃಷ್ಣ ಡಿ. ಶೆಟ್ಟಿಗಾರ್ ಕಿನ್ನಿಗೋಳಿ; ಉತ್ತರಭಾಗದ ಹಿಡಿಂಬಾಸುರನಾಗಿ -ಶ್ರೀ ಚರಣ್ ರಾಜ್ ಅರ್ಲಪದವು; ಘೋರ ಹಿಡಿಂಬೆಯಾಗಿ-ಶ್ರೀ ಸತೀಶ ಶೆಟ್ಟಿಗಾರ್ ಪೂರ್ಲಪಾಡಿ; ಮಾಯಾ ಹಿಡಿಂಬೆಯಾಗಿ ಕೇಂದ್ರದ ನಾಟ್ಯ ಗುರುಗಳಾದ ಶ್ರೀ ಶರತ್ ಕುಡ್ಲ; ವೇದವ್ಯಾಸ-ಶ್ರೀಮತಿ ಮಮತಾ ವಿಪಿನ್, ಮೊದಲಾದವರು ಪ್ರಸಂಗವನ್ನು ಚೆನ್ನಾಗಿ ಕಟ್ಟಿಕೊಟ್ಟರು.
ಮಕ್ಕಳ ಸಾಧನೆ- ಪ್ರದರ್ಶನ ಸೇರಿದ ಕೇಂದ್ರದ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದ ನಂತರ ಪ್ರೀತಿ ಭೋಜನದ ವ್ಯವಸ್ಥೆ ಮೂಲಕ ಶ್ರೀಮತಿ ಆರತಿ ದಿನೇಶ ಶೆಟ್ಟಿಯವರು ಎಲ್ಲರನ್ನೂ ಸತ್ಕರಿಸಿ ಬೀಳ್ಕೊಟ್ಟರು.

ಕಾರ್ಯಕ್ರಮದ ಪ್ರಚಾರ ಪತ್ರಿಕೆಗಳನ್ನು ಸಿದ್ಧಪಡಿಸಿದ ಶ್ರೀಯುತ ಗಿರೀಶ್ ನಾರಾಯಣ ಕಾಟಿಪಳ್ಳರವರು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮದ ಯಶಸ್ಸನ್ನು ಹಂಚಿಕೊಂಡರು.

LEAVE A REPLY

Please enter your comment!
Please enter your name here