ಖೋಟಾನೋಟು ಜಾಲದ ತನಿಖೆ ತೀವ್ರ: ಬೆಳ್ತಂಗಡಿಯಲ್ಲಿ ಮತ್ತೊಂದು ಪೊಲೀಸ್ ದಾಳಿ

0
11

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಖೋಟಾನೋಟು ಮುದ್ರಣ ಜಾಲದ ತನಿಖೆಯನ್ನು ಉಪ್ಪಿನಂಗಡಿ ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಬೆಳ್ತಂಗಡಿಯಲ್ಲಿ ಮತ್ತೊಂದು ಮಹತ್ವದ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಜುಲೈ 15ರಂದು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಣಿಯೂರು ಗ್ರಾಮದ ಅಡೆಂಜ ನಿವಾಸಿ ಮಹಮ್ಮದ್ ಇದೀಸ್ ಅವರ ನೂತನ ಕಟ್ಟಡದ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಖೋಟಾನೋಟು ತಯಾರಿಸುತ್ತಿದ್ದ ಅಕ್ರಮ ಕೇಂದ್ರವನ್ನು ಪತ್ತೆಹಚ್ಚಿ ಏಳು ಮಂದಿಯನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳ ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಹೊಸ ಮಾಹಿತಿಗಳು ಬೆಳಕಿಗೆ ಬಂದಿವೆ.

ವಿಚಾರಣೆ ವೇಳೆ ಆರೋಪಿಗಳು, ಉಪ್ಪಿನಂಗಡಿಗೆ ಸ್ಥಳಾಂತರಗೊಳ್ಳುವ ಮೊದಲು ಬೆಳ್ತಂಗಡಿಯ ಎರಡು ಬಾಡಿಗೆ ಮನೆಗಳಲ್ಲಿ ಖೋಟಾನೋಟು ಮುದ್ರಣಕ್ಕೆ ಸಿದ್ಧತೆ ನಡೆಸಿದ್ದಾಗಿ ಬಾಯಿಬಿಟ್ಟಿದ್ದಾರೆ. ಸ್ಥಳಾವಕಾಶದ ಕೊರತೆಯಿಂದ ಬಳಿಕ ಉಪ್ಪಿನಂಗಡಿಗೆ ಕಾರ್ಯಾಚರಣೆಯನ್ನು ಸ್ಥಳಾಂತರಿಸಿದ್ದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಬೆಳ್ತಂಗಡಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.

ಈ ಮಾಹಿತಿಯ ಆಧಾರದಲ್ಲಿ ಬೆಳ್ತಂಗಡಿ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದುಕೊಂಡ ಪೊಲೀಸರು, ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ರಸ್ತೆಯಲ್ಲಿರುವ ಪಾಡ್ಯಾರಮಜಲು ನಿವಾಸಿ ಅಬ್ದುಲ್ ಶಕಿಲ್ ಅವರಿಗೆ ಸೇರಿದ ಬಿ.ಎ. ಅಪಾರ್ಟ್‌ಮೆಂಟ್‌ನ 14 ಬಾಡಿಗೆ ಮನೆಗಳ ಪೈಕಿ 101 ಹಾಗೂ 108ನೇ ಕೊಠಡಿಗಳಲ್ಲಿ ಭಾನುವಾರ ಬೆಳಿಗ್ಗೆ ಶೋಧ ನಡೆಸಿದರು.

ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ ಸಿ.ಕೆ. ಅವರ ನೇತೃತ್ವದಲ್ಲಿ ಉಪ್ಪಿನಂಗಡಿ ಪೊಲೀಸರು, ಪ್ರಕರಣದ ಆರೋಪಿ ಉತ್ತರ ಕನ್ನಡ ಜಿಲ್ಲೆಯ ಸಂದೀಪ್ ಪುಂಡಲೀಕ ಶೋಳಂಬಿ (30) ಅವರನ್ನು ಸ್ಥಳಕ್ಕೆ ಕರೆತಂದು ಪರಿಶೀಲನೆ ನಡೆಸಿದರು.

ಶೋಧದ ವೇಳೆ 101ನೇ ಬಾಡಿಗೆ ಕೊಠಡಿಯಿಂದ ಎರಡು ಪ್ರಿಂಟರ್‌ಗಳು, ಇಂಕ್ (ಸ್ಯಾಹಿ) ಡಬ್ಬಿಗಳು, ಮುದ್ರಣಕ್ಕೆ ಬಳಸಲಾಗಿದ್ದ 44 ಶೀಟ್‌ಗಳ ಕಾಗದ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಧ್ಯಾಹ್ನ ಸುಮಾರು 1.03ರವರೆಗೆ ಮಹಜರು ಪ್ರಕ್ರಿಯೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು.

ಈ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪಿಎಸ್‌ಐ ಕೌಶಿಕ್, ಎಎಸ್‌ಐ ವೆಂಕಟೇಶ್ ನಾಯಕ್, ಪಿಸಿ ನಾಗರಾಜ್ ಹಾಗೂ ಬೆಳ್ತಂಗಡಿ ಉಪವಿಭಾಗ ಕಚೇರಿಯ ಎಎಸ್‌ಐ ಲಾರೆನ್ಸ್, ಎಎಸ್‌ಐ ಶಿವರಾಂ, ಹೆಚ್‌ಸಿ ಸವಿತಾ ಶೆಟ್ಟಿ, ಮನು ನಾಯಕ್, ಯಕಮ್ಮ ಬಿ. ಚೌದ್ರಿ, ಚಾಲಕ ಪ್ರವೀಣ್ ಹಾಗೂ ಎಫ್‌ಎಸ್‌ಎಲ್ (SOCO) ತಂಡದ ಅರ್ಪಿತಾ, ಕಾವ್ಯಶ್ರೀ ಮತ್ತು ಚಾಲಕ ಮುಸ್ತಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಕರಣದ ತನಿಖೆ ಮುಂದುವರಿದಿದ್ದು, ಖೋಟಾನೋಟು ಜಾಲದ ಹಿಂದೆ ಇರುವ ಇತರ ಆರೋಪಿಗಳು ಹಾಗೂ ಅದರ ವಿಸ್ತೃತ ಜಾಲವನ್ನು ಪತ್ತೆಹಚ್ಚಲು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.