ಕರಾವಳಿಗೆ ರೆಡ್ ಅಲರ್ಟ್ ಸಮಾನ ಎಚ್ಚರಿಕೆ : ಜೂನ್ 11ರವರೆಗೆ ಆರೆಂಜ್ ಅಲರ್ಟ್ ಘೋಷಣೆ!

0
33

ಉಡುಪಿ : ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಜೂನ್ 5ರಿಂದ 11ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಭಾರೀ ಮಳೆ ಹಾಗೂ ಬಲವಾದ ಗಾಳಿ ಬೀಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ ಸಾರ್ವಜನಿಕರಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.

ಮಳೆ, ಗಾಳಿ ಹಾಗೂ ಸಿಡಿಲು ಸಂಭವಿಸುವ ವೇಳೆ ಸಾರ್ವಜನಿಕರು, ಮಕ್ಕಳು ಮತ್ತು ಕಾರ್ಮಿಕರು ಹೊರಗಡೆ ಸಂಚರಿಸುವುದನ್ನು ತಪ್ಪಿಸಿ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯಬೇಕು ಎಂದು ಸೂಚಿಸಲಾಗಿದೆ. ಕೃಷಿಕರು ಸಹ ಮಳೆ ಮತ್ತು ಸಿಡಿಲಿನ ಸಂದರ್ಭ ಕೃಷಿ ಚಟುವಟಿಕೆಗಳಲ್ಲಿ ತೊಡಗದಂತೆ ಮನವಿ ಮಾಡಲಾಗಿದೆ.

ನದಿ, ಹೊಳೆ, ತಗ್ಗು ಪ್ರದೇಶ ಹಾಗೂ ಸಮುದ್ರ ತೀರಗಳಿಗೆ ಸಾರ್ವಜನಿಕರು, ಪ್ರವಾಸಿಗರು ಮತ್ತು ಮೀನುಗಾರರು ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಅಪಾಯಕಾರಿ ಮರಗಳು, ವಿದ್ಯುತ್ ಕಂಬಗಳು ಹಾಗೂ ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರುವಂತೆ ಸಲಹೆ ನೀಡಲಾಗಿದೆ.

ಭಾರೀ ಮಳೆಯಿಂದ ಕೆಲವು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದ್ದು, ಅಪಾಯದ ಪ್ರದೇಶಗಳಲ್ಲಿರುವ ಜನರು ಅಗತ್ಯವಿದ್ದಲ್ಲಿ ತಹಶೀಲ್ದಾರ್ ಕಚೇರಿ ಅಥವಾ ಗ್ರಾಮ ಪಂಚಾಯಿತಿ ಸಂಪರ್ಕಿಸಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು 1077 ಉಚಿತ ಸಹಾಯವಾಣಿ, ಜಿಲ್ಲಾ ಕಂಟ್ರೋಲ್ ರೂಮ್ 0820-2574802 ಅಥವಾ ಸಂಬಂಧಿಸಿದ ತಾಲೂಕು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನೆರವು ಪಡೆಯಬಹುದಾಗಿದೆ.

ಇದೇ ವೇಳೆ, ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 6.9 ಮಿ.ಮೀ. ಮಳೆ ದಾಖಲಾಗಿದೆ. ತಾಲೂಕುವಾರು ಮಳೆಯ ವಿವರ ಹೀಗಿದೆ:

  • ಕುಂದಾಪುರ – 9.3 ಮಿ.ಮೀ.
  • ಕಾಪು – 8.1 ಮಿ.ಮೀ.
  • ಕಾರ್ಕಳ – 7.1 ಮಿ.ಮೀ.
  • ಹೆಬ್ರಿ – 6.9 ಮಿ.ಮೀ.
  • ಉಡುಪಿ – 5.9 ಮಿ.ಮೀ.
  • ಬ್ರಹ್ಮಾವರ – 5.8 ಮಿ.ಮೀ.
  • ಬೈಂದೂರು – 3.6 ಮಿ.ಮೀ.

LEAVE A REPLY

Please enter your comment!
Please enter your name here