ಬಾಕ್ಸ್ ಆಫೀಸ್‌ನಲ್ಲಿ ‘ಪೆದ್ದಿ’ ಅಬ್ಬರ: ಮೊದಲ ದಿನವೇ 100 ಕೋಟಿ ಕಲೆಕ್ಷನ್!

0
19

ಹೈದರಾಬಾದ್ : ಟಾಲಿವುಡ್ ಸ್ಟಾರ್ ರಾಮ್ ಚರಣ್ ಅಭಿನಯದ ಬಹು ನಿರೀಕ್ಷಿತ ‘ಪೆದ್ದಿ’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ದಾಖಲೆ ಬರೆದಿದೆ. ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಂಡಿರುವ ಈ ಚಿತ್ರ, ಮೊದಲ ದಿನವೇ 100 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಸಿನಿಪ್ರಿಯರ ಗಮನ ಸೆಳೆದಿದೆ.

ಹೈದರಾಬಾದ್, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಮುಂಜಾನೆ ವಿಶೇಷ ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ಮೊದಲ ದಿನದಿಂದಲೇ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಮ್ ಚರಣ್ ಅವರ ಮಾಸ್ ಅವತಾರ, ಆ್ಯಕ್ಷನ್ ದೃಶ್ಯಗಳು ಹಾಗೂ ಭಾವನಾತ್ಮಕ ಕಥಾಹಂದರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.

‘ಪೆದ್ದಿ’ ಚಿತ್ರದ ಮೂಲಕ ರಾಮ್ ಚರಣ್ ಅವರು ಮತ್ತೊಮ್ಮೆ ತಮ್ಮ ಬಾಕ್ಸ್ ಆಫೀಸ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದು, ಮೊದಲ ದಿನದ ಗಳಿಕೆಯಲ್ಲೇ ನೂರರ ಗಡಿ ದಾಟಿರುವುದು ಚಿತ್ರತಂಡದಲ್ಲಿ ಸಂಭ್ರಮ ಮೂಡಿಸಿದೆ. ವಾರಾಂತ್ಯದಲ್ಲಿ ಚಿತ್ರದ ಕಲೆಕ್ಷನ್ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

‘ಆರ್‌ಆರ್‌ಆರ್‌’ ಚಿತ್ರದ ಬಳಿಕ ಬಿಡುಗಡೆಯಾದ ‘ಆಚಾರ್ಯ’ ಹಾಗೂ ‘ಗೇಮ್ ಚೇಂಜರ್’ ಚಿತ್ರಗಳು ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆಯಲ್ಲಿ, ರಾಮ್ ಚರಣ್ ಅವರಿಗೆ ಒಂದು ಭರ್ಜರಿ ಹಿಟ್ ಅಗತ್ಯವಾಗಿತ್ತು. ಇದೀಗ ‘ಪೆದ್ದಿ’ ಆ ಕೊರತೆಯನ್ನು ನೀಗಿಸುವತ್ತ ಹೆಜ್ಜೆಯಿಟ್ಟಿದೆ ಎಂದು ಸಿನಿ ವಲಯದಲ್ಲಿ ಚರ್ಚೆಯಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲೂ ‘ಪೆದ್ದಿ’ ಚಿತ್ರದ ಯಶಸ್ಸು ಟ್ರೆಂಡ್ ಆಗಿದ್ದು, ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

LEAVE A REPLY

Please enter your comment!
Please enter your name here