ಅಡುಗೆಮನೆಯಲ್ಲಿ ಅವಘಡ : ಸ್ಫೋಟಗೊಂಡ ಪ್ರೆಶರ್ ಕುಕ್ಕರ್..!

0
99

ಭೋಪಾಲ್ : ಅಡುಗೆ ಮಾಡುತ್ತಿದ್ದ ವೇಳೆ ಪ್ರೆಶರ್ ಕುಕ್ಕರ್ ಏಕಾಏಕಿ ಸ್ಫೋಟಗೊಂಡು ಮಹಿಳೆಯೊಬ್ಬರು ಅಪಾಯದಿಂದ ಪಾರಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ಸಿಸಿಟಿವಿ ದೃಶ್ಯದಲ್ಲಿ ಮಹಿಳೆ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿರುವುದು ಕಾಣಿಸುತ್ತದೆ. ಒಂದು ಒಲೆಯ ಮೇಲೆ ಪ್ರೆಶರ್ ಕುಕ್ಕರ್ ಇಟ್ಟು ಅಡುಗೆ ಮಾಡುತ್ತಿದ್ದ ವೇಳೆ, ಪಕ್ಕದ ಒಲೆಯ ಮೇಲೆ ಮತ್ತೊಂದು ಪಾತ್ರೆ ಇಡಲು ಮುಂದಾಗುತ್ತಿದ್ದಂತೆಯೇ ಕುಕ್ಕರ್ ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡಿದೆ.

ಸ್ಫೋಟದ ಪರಿಣಾಮ ಕುಕ್ಕರ್‌ನಲ್ಲಿದ್ದ ಬಿಸಿ ಪದಾರ್ಥಗಳು ಮಹಿಳೆಯ ಮೇಲೆ ಎರಚಿಕೊಂಡಿದ್ದು, ಇಡೀ ಅಡುಗೆಮನೆ ಕ್ಷಣಾರ್ಧದಲ್ಲಿ ಹೊಗೆ ಆವರಿಸಿದೆ. ಘಟನೆಯ ತೀವ್ರತೆಯನ್ನು ಗಮನಿಸಿದರೆ ಮಹಿಳೆಗೆ ಗಾಯಗಳಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಅವರ ಆರೋಗ್ಯ ಸ್ಥಿತಿಯ ಕುರಿತು ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಘಟನೆಯ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅಡುಗೆಮನೆಯ ಸುರಕ್ಷತೆ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಹಲವರು ಕಡಿಮೆ ಬೆಲೆಯ, ಗುಣಮಟ್ಟವಿಲ್ಲದ ಅಥವಾ ಸುರಕ್ಷತಾ ಪ್ರಮಾಣೀಕರಣವಿಲ್ಲದ ಕುಕ್ಕರ್ ಬಳಕೆಯೇ ಇಂತಹ ಅವಘಡಗಳಿಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಕೆಲವರು ಕುಕ್ಕರ್‌ನ ವಾಷರ್ (ಗ್ಯಾಸ್ಕೆಟ್), ಸೇಫ್ಟಿ ವಾಲ್ವ್ ಹಾಗೂ ಇತರ ಸುರಕ್ಷತಾ ಭಾಗಗಳನ್ನು ನಿಯಮಿತವಾಗಿ ಬದಲಾಯಿಸದಿರುವುದು ಅಪಾಯಕ್ಕೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಡುಗೆ ಮಾಡುವಾಗ ಗ್ಯಾಸ್ ಸ್ಟೌವ್ ಹಾಗೂ ಸಿಲಿಂಡರ್ ಅನ್ನು ಸುರಕ್ಷಿತ ಅಂತರದಲ್ಲಿ ಇಡುವುದು, ಕುಕ್ಕರ್‌ನ ನಿರ್ವಹಣೆಯನ್ನು ಸರಿಯಾಗಿ ಮಾಡುವುದು ಹಾಗೂ ಗುಣಮಟ್ಟದ ಉತ್ಪನ್ನಗಳನ್ನೇ ಬಳಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

LEAVE A REPLY

Please enter your comment!
Please enter your name here