ಮಂಗಳೂರು : ಜೂನ್ 22ರಂದು ಮಂಗಳೂರಿನ ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನ ಆರೋಗ್ಯ, ಸ್ವಚ್ಛತೆ ಮತ್ತು ಕ್ಷೇಮಾಭಿವೃದ್ಧಿ ಕ್ಲಬ್ ಸಂಘದವತಿಯಿಂದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 22ರಂದು ಬೆಳಿಗ್ಗೆ 8.15 ಗಂಟೆಗೆ ಕಾಲೇಜಿನ ಉಪನ್ಯಾಸ ಕೊಠಡಿ-04ರಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ಮುಖ್ಯ ಅತಿಥಿ ರಜನಿ ಟಿ. ರೈ ಆರ್ಟ್ ಆಫ್ ಲಿವಿಂಗ್ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕಿ ಅವರು ಯೋಗದ ಮಹತ್ವದ ಕುರಿತು ಮಾತನಾಡಿ, ಯೋಗ ಮತ್ತು ಧ್ಯಾನವು ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು. ನಿಯಮಿತ ಯೋಗಾಭ್ಯಾಸದಿಂದ ಒತ್ತಡ ಕಡಿಮೆಯಾಗುವುದಲ್ಲದೆ ಏಕಾಗ್ರತೆ ವೃದ್ಧಿಯಾಗಿ ಶಿಸ್ತುಬದ್ಧ ಹಾಗೂ ಸಮತೋಲನಯುತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು. ಅಲ್ಲದೆ ಪತಂಜಲಿ ಯೋಗ ಸೂತ್ರಗಳ ಮಹತ್ವವನ್ನು ವಿವರಿಸಿ, ಆತ್ಮಶಾಂತಿ, ಆತ್ಮನಿಗ್ರಹ ಹಾಗೂ ಜೀವನದಲ್ಲಿ ಸಾಮರಸ್ಯ ಸಾಧಿಸಲು ಅವುಗಳ ಪ್ರಸ್ತುತತೆಯನ್ನು ತಿಳಿಸಿದರು.

ಗೌರವ ಅತಿಥಿ ಶ್ರೀದೇವಿ ಆರ್. ಅಮೀನ್ ವಕೀಲೆ ಹಾಗೂ ನೊಟರಿ, ಕಾನೂನು ಸಲಹಾ ಗಾರ್ತಿ ಎಸ್ ಸಿ ಎಸ್ ಸಮೂಹ ಶಿಕ್ಷಣ ಸಂಸ್ಥೆ ಅವರು ಮಾತನಾಡಿ, “ಯೋಗವು ಕೇವಲ ದೇಹವನ್ನು ಸದೃಢಗೊಳಿಸುವುದಲ್ಲ, ಮನಸ್ಸನ್ನು ಸಮತೋಲನಗೊಳಿಸುವ ಸಾಧನವೂ ಆಗಿದೆ. ಯೋಗವು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ; ಎಲ್ಲರೂ ಧರ್ಮಭೇದವಿಲ್ಲದೆ ಅಳವಡಿಸಿಕೊಳ್ಳಬೇಕಾದ ಜೀವನ ಪದ್ಧತಿಯಾಗಿದೆ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾಣ್ ವಹಿಸಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ಸರಸ್ವತಿ ಚಿನ್ನ ಕಟ್ಟಿ ಅವರು ಈ ವರ್ಷದ ಯೋಗ ದಿನಾಚರಣೆಯ ಧ್ಯೇಯವಾಕ್ಯ “ಆರೋಗ್ಯಕರ ವಯೋವೃದ್ಧಿಗಾಗಿ ಯೋಗ” ಇದರ ಉದ್ದೇಶವನ್ನು ಪರಿಚಯಿಸಿದರು.

ವಾಣಿಜ್ಯ ವಿಭಾಗದ ಉಪನ್ಯಾಸಕಿ ದೀಕ್ಷಿತಾ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕಿ ಸಂಗೀತಾ ಶಾನುಭೋಗ ಅವರು ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಒಟ್ಟು 25 ಮಂದಿ ಅಧ್ಯಾಪಕರು ಭಾಗವಹಿಸಿ ವಿವಿಧ ಯೋಗಾಸನಗಳು ಹಾಗೂ ಉಸಿರಾಟದ ಅಭ್ಯಾಸಗಳನ್ನು ಪ್ರದರ್ಶಿಸಿದರು. ಯೋಗದ ಮೂಲಕ ಆರೋಗ್ಯಕರ ಜೀವನಶೈಲಿ ಹಾಗೂ ಸುಂದರ ವಯೋವೃದ್ಧಿಯನ್ನು ಸಾಧಿಸುವ ಕುರಿತು ಉಪಯುಕ್ತ ಮಾಹಿತಿಯನ್ನು ಕಾರ್ಯಕ್ರಮವು ಒದಗಿಸಿತು.
ಇಂಟೀರಿಯರ್ ಡಿಸೈನ್ ಉಪನ್ಯಾಸಕಿ ಫಾತಿಮತುಲ್ ಅಜ್ಮಿಯಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂಸ್ಥೆಯ ಗೀತೆಯೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.

