ಬೋಳ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ದರ್ಶನ ಪಾತ್ರಿ ದೈವಾಧೀನ

0
146

ಕಾರ್ಕಳ: ಬೋಳ ಮಲ್ಲಿಗೆ ಗರಡಿ ಎಂಬ ಖ್ಯಾತಿಯನ್ನು ಹೊಂದಿರುವ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ದರ್ಶನ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕಲ್ಲೊಟ್ಟೆ ರಮೇಶ್ ಸುವರ್ಣ ಅವರು ದಿನಾಂಕ 21-06-2026 ರ ಭಾನುವಾರ ಅಸೌಖ್ಯದಿಂದ ನಿಧನರಾದರು.

ದಿವಂಗತ ಬಾಬು ಪೂಜಾರಿ ಹಾಗೂ ಅಪ್ಪಿ ಪೂಜಾರ್ತಿಯವರ ಐದು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳಲ್ಲಿ ನಾಲ್ಕನೇಯವರಾಗಿ ಬೋಳ ಗ್ರಾಮದಲ್ಲಿ ಜನಿಸಿದ ಶ್ರೀ ರಮೇಶ್ ಸುವರ್ಣ ಅವರು ಬಾಲ್ಯದಿಂದಲೇ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಭಕ್ತರಾಗಿದ್ದರು. ಬೋಳ ಮಲ್ಲಿಗೆ ಗರಡಿ, ಕಲ್ಯಾ ಗರಡಿ ಹಾಗೂ ಮುಂಡ್ಕೂರು ಗರಡಿಗಳಲ್ಲಿ ಚಾಕಿರಿ ಮಾಣಿಯಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿ ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಅವರ ಭಕ್ತಿ ಹಾಗೂ ನಿಸ್ವಾರ್ಥ ಸೇವೆಯನ್ನು ಮೆಚ್ಚಿದ ಶ್ರೀ ಬೈದರ್ಕಳರು, ಜೀರ್ಣೋದ್ಧಾರಗೊಂಡ ನೂತನ ಬೋಳ ಮಲ್ಲಿಗೆ ಗರಡಿಯಲ್ಲಿ ದರ್ಶನ ಪಾತ್ರಿಯಾಗಿ ಸೇವೆ ಸಲ್ಲಿಸುವ ಭಾಗ್ಯವನ್ನು ಅವರಿಗೆ ಕರುಣಿಸಿದ್ದರು.

ಇದರೊಂದಿಗೆ, ಶ್ರೀ ರಮೇಶ್ ಸುವರ್ಣ ಅವರು ಸಾಮಾಜಿಕ ಕಾರ್ಯಗಳಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದು, ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಂಘ (ರಿ.), ಬೋಳದಲ್ಲಿ ಗೌರವ ಸದಸ್ಯರಾಗಿ, ಬಿಲ್ಲವ ಸಂಘ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಅವರು ಪತ್ನಿ ಸುಜಾತ, ಪುತ್ರರಾದ ರಕ್ಷಿತ್ ಹಾಗೂ ಸುರಕ್ಷ್ ಅವರನ್ನು ಸೇರಿದಂತೆ ಅಪಾರ ಬಂಧು-ಬಳಗ, ಸ್ನೇಹಿತರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here