ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ ವರ್ಗಾವಣೆಗೆ ಸಂಬಂಧಿಸಿದ ಗಂಭೀರ ಲೋಪಗಳು ಬೆಳಕಿಗೆ ಬಂದಿದ್ದು, ಬ್ಯಾಂಕ್ ಖಾತೆ ಸಂಖ್ಯೆಗಳೇ ಇಲ್ಲದ ಸುಮಾರು 23,262 ಫಲಾನುಭವಿಗಳ ಹೆಸರಿಗೆ ₹46.52 ಕೋಟಿ ಹಣ ವರ್ಗಾವಣೆ ಮಾಡಿರುವುದು ಮಹಾಲೆಕ್ಕಪರಿಶೋಧಕರ (ಸಿಎಜಿ) ಪರಿಶೀಲನೆಯಲ್ಲಿ ಪತ್ತೆಯಾಗಿದೆ.
ಸಿಎಜಿ ನಡೆಸಿದ ಆಡಿಟ್ ವರದಿಯ ಪ್ರಕಾರ, ಸುಮಾರು 19 ಸಾವಿರ ಫಲಾನುಭವಿಗಳು ಒಂದೇ ಬ್ಯಾಂಕ್ ಖಾತೆಯನ್ನು ಜೋಡಣೆ ಮಾಡಿಕೊಂಡಿದ್ದು, ಆ ಖಾತೆಗೆ ಕೋಟ್ಯಂತರ ರೂಪಾಯಿ ಹಣ ಹರಿದಿರುವುದು ಕಂಡುಬಂದಿದೆ. ಈ ಕುರಿತು ಮಾಹಿತಿ ಹಾಗೂ ಸ್ಪಷ್ಟೀಕರಣ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಿಎಜಿ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಈಗಾಗಲೇ ₹75 ಸಾವಿರ ಕೋಟಿಗೂ ಅಧಿಕ ಮೊತ್ತವನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಬ್ಯಾಂಕ್ ಖಾತೆ ಮತ್ತು ಫಲಾನುಭವಿಗಳ ಮಾಹಿತಿಗೆ ಸಂಬಂಧಿಸಿದ ಹಲವು ಗಂಭೀರ ಲೋಪಗಳು ಪತ್ತೆಯಾಗಿವೆ. 8,995 ಬ್ಯಾಂಕ್ ಖಾತೆಗಳಿಗೆ ಸುಮಾರು ₹1.80 ಕೋಟಿ ಮೊತ್ತವನ್ನು ಪುನರಾವರ್ತಿತವಾಗಿ ಜಮೆ ಮಾಡಿರುವ ಅಂಶವೂ ಸಿಎಜಿ ಡೇಟಾ ಅನಾಲಿಟಿಕ್ಸ್ ವಿಭಾಗದ ಆಡಿಟ್‌ನಲ್ಲಿ ಬೆಳಕಿಗೆ ಬಂದಿದೆ.
ಇದಲ್ಲದೆ, 10,36,308 ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಬದಲಾಯಿಸಿರುವುದು ಕೂಡ ವರದಿಯಲ್ಲಿ ಉಲ್ಲೇಖವಾಗಿದೆ. ಡಿಬಿಟಿ (Direct Benefit Transfer) ವ್ಯವಸ್ಥೆಯ ಮೂಲಕ ಬ್ಯಾಂಕ್ ಖಾತೆಗಳಿಗೆ ಮಾತ್ರ ಹಣ ಜಮೆಯಾಗಬೇಕಾದ ಸಂದರ್ಭದಲ್ಲಿ ಖಾತೆ ಸಂಖ್ಯೆಗಳೇ ಇಲ್ಲದವರ ಹೆಸರಿಗೆ ಹಣ ವರ್ಗಾವಣೆಯಾಗಿರುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.
ಈ ಕುರಿತು ಸಂಪೂರ್ಣ ಮಾಹಿತಿ ಮತ್ತು ಸ್ಪಷ್ಟೀಕರಣಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಸಂಪರ್ಕಿಸಿದರೂ ಸ್ಪಷ್ಟ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ವರದಿಗಳು ತಿಳಿಸಿವೆ. ಗೃಹಲಕ್ಷ್ಮಿ ಯೋಜನೆಯ ಹಣಕಾಸು ನಿರ್ವಹಣೆ ಮತ್ತು ಫಲಾನುಭವಿಗಳ ಮಾಹಿತಿ ಪರಿಶೀಲನೆ ಕುರಿತು ಇದೀಗ ಹೊಸ ಚರ್ಚೆಗಳು ಆರಂಭವಾಗಿವೆ.

