ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಭೀಕರ ಹತ್ಯೆ ; ಮನೆ ಹಿಂಭಾಗದಲ್ಲಿ ರಕ್ತದ ಮಡುವಿನಲ್ಲಿ ಶವ ಪತ್ತೆ..!

0
37

ತುಮಕೂರು : ತಾಲ್ಲೂಕಿನ ಚಿಕ್ಕಬಿದರೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಶಿವಪ್ಪ (44) ಕೊಲೆಯಾದ ದುರ್ದೈವಿ.

ಶಿವಪ್ಪ ಅವರು ಪತ್ನಿ ಸಾವಿತ್ರಮ್ಮ ಹಾಗೂ ಮಗನೊಂದಿಗೆ ಚಿಕ್ಕಬಿದರೆ ಕ್ಯಾಂಪ್‌ನಲ್ಲಿ ವಾಸವಿದ್ದರು. ಸಾವಿತ್ರಮ್ಮ ಅವರು ನರೇಗಾ ಕೆಲಸಕ್ಕೆ ತೆರಳಿದ್ದು, ಬೆಳಿಗ್ಗೆ 11.30ಕ್ಕೆ ಮನೆಗೆ ವಾಪಸ್ ಬಂದಾಗ ಶಿವಪ್ಪ ಮನೆಯಲ್ಲಿ ಇರಲಿಲ್ಲ. ರಾತ್ರಿ 10 ಗಂಟೆಯವರೆಗೂ ಅವರು ಮನೆಗೆ ಬಾರದ ಕಾರಣ ಪತ್ನಿ ಹಾಗೂ ಮಗ ಊಟ ಮಾಡಿ ಮಲಗಿದ್ದರು.

ಜೂನ್ 23ರ ಮುಂಜಾನೆ ಸುಮಾರು 4.30ರ ವೇಳೆಗೆ ಎಂದಿನಂತೆ ಎದ್ದ ಸಾವಿತ್ರಮ್ಮ ಮನೆಯ ಹಿಂಭಾಗದ ಬಾಗಿಲು ತೆರೆದು ನೋಡಿದಾಗ, ಕಾಂಪೌಂಡ್‌ನ ಸಿಮೆಂಟ್ ಚಡಿಯ ಮೇಲೆ ಶಿವಪ್ಪ ಮಕಾಡೆಯಾಗಿ ಬಿದ್ದಿರುವುದು ಕಂಡುಬಂದಿದೆ. ತಲೆಗೆ ಗಂಭೀರ ಗಾಯಗಳಾಗಿದ್ದು, ಕಿವಿ ಹಾಗೂ ಮೂಗಿನಿಂದ ರಕ್ತಸ್ರಾವವಾಗಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿರುವುದು ತಿಳಿದುಬಂದಿದೆ.

ದುಷ್ಕರ್ಮಿಗಳು ಮಾರಕಾಸ್ತ್ರ ಅಥವಾ ಕಲ್ಲಿನಿಂದ ತಲೆಗೆ ಹೊಡೆದು ಶಿವಪ್ಪ ಅವರನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಮೃತನ ಅಣ್ಣ ಬಸಪ್ಪ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here