
ಇಂದಿನ ವೇಗದ ಜೀವನಶೈಲಿಯಲ್ಲಿ ನಿದ್ರಾಹೀನತೆ (Insomnia) ಅನೇಕರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ, ಖಿನ್ನತೆ, ದೈಹಿಕ ಚಟುವಟಿಕೆಯ ಕೊರತೆ ಹಾಗೂ ಕಳಪೆ ದಿನಚರಿಯ ಜೊತೆಗೆ ರಾತ್ರಿ ಮಲಗುವ ಮುನ್ನ ಮಾಡುವ ಕೆಲವು ತಪ್ಪುಗಳು ನಿದ್ರೆಯ ಗುಣಮಟ್ಟವನ್ನು ಹಾಳುಮಾಡಿ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತವೆ ಎಂದು ತಜ್ಞರು ಎಚ್ಚರಿಸುತ್ತಾರೆ.
ಭಾರವಾದ ಆಹಾರ ಸೇವನೆ ಬೇಡ:
ಮಲಗುವ ಮುನ್ನ ಹೆಚ್ಚಿನ ಪ್ರಮಾಣದ ಅಥವಾ ಭಾರವಾದ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆಯ ಮೇಲೆ ಒತ್ತಡ ಉಂಟಾಗಿ ಅಜೀರ್ಣ, ಆಮ್ಲೀಯತೆ ಹಾಗೂ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕಾಣಿಸಬಹುದು. ಇದು ನಿದ್ರೆಗೆ ಅಡ್ಡಿಯಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಮಲಗುವ ಕನಿಷ್ಠ 2-3 ಗಂಟೆಗಳ ಮೊದಲು ಹಗುರವಾದ ಆಹಾರ ಸೇವಿಸುವುದು ಉತ್ತಮ.
ಫೋನ್, ಲ್ಯಾಪ್‌ಟಾಪ್ ಬಳಕೆ ತಪ್ಪಿಸಿ:
ಮಲಗುವ ಮುನ್ನ ಮೊಬೈಲ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಬಳಸುವುದರಿಂದ ಅವುಗಳಿಂದ ಹೊರಬರುವ ನೀಲಿ ಬೆಳಕು ಮೆಲಟೋನಿನ್ ಹಾರ್ಮೋನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ನಿದ್ರೆ ಬರಲು ವಿಳಂಬವಾಗಬಹುದು. ಆದ್ದರಿಂದ ಮಲಗುವ ಒಂದು ಗಂಟೆ ಮೊದಲು ಡಿಜಿಟಲ್ ಸಾಧನಗಳಿಂದ ದೂರವಿರುವುದು ಉತ್ತಮ.
ಸಂಜೆ ನಂತರ ಕೆಫೀನ್ ಸೇವನೆ ಕಡಿಮೆ ಮಾಡಿ:
ಕಾಫಿ, ಟೀ, ಚಾಕೊಲೇಟ್ ಹಾಗೂ ಕೆಲವು ತಂಪು ಪಾನೀಯಗಳಲ್ಲಿ ಇರುವ ಕೆಫೀನ್ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಮದ್ಯಪಾನವೂ ನೈಸರ್ಗಿಕ ನಿದ್ರೆಯ ಚಕ್ರವನ್ನು ಅಸ್ತವ್ಯಸ್ತಗೊಳಿಸಬಹುದು.
ರಾತ್ರಿ ಐಸ್‌ಕ್ರೀಂ ತಿನ್ನಬೇಡಿ:
ಊಟದ ನಂತರ ಐಸ್‌ಕ್ರೀಂ ತಿನ್ನುವ ಅಭ್ಯಾಸ ಹಲವರಲ್ಲಿದೆ. ಆದರೆ ಐಸ್‌ಕ್ರೀಂನಲ್ಲಿ ಸಕ್ಕರೆ ಮತ್ತು ಕೊಬ್ಬಿನ ಅಂಶ ಹೆಚ್ಚಿರುವುದರಿಂದ ನಿದ್ರೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಹೀಗಾಗಿ ಮಲಗುವ ಮುನ್ನ ಐಸ್‌ಕ್ರೀಂ ಸೇವನೆ ತಪ್ಪಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
ಆರೋಗ್ಯಕರ ನಿದ್ರೆ ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯ. ಆದ್ದರಿಂದ ಉತ್ತಮ ನಿದ್ರೆಗಾಗಿ ರಾತ್ರಿ ಸಮಯದಲ್ಲಿ ಈ ಅಭ್ಯಾಸಗಳನ್ನು ದೂರವಿಡುವುದು ಒಳಿತು.
