ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮಂತ್ರಿಮಂಡಲ ಉದ್ಘಾಟನಾ ಸಮಾರಂಭ

0
207

ಮೂಡುಬಿದಿರೆ : ಶಾಲಾ ಮಂತ್ರಿಮಂಡಲ ಉದ್ಘಾಟನಾ ಸಮಾರಂಭ ದಿನಾಂಕ 23-06-2026 ರಂದು ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ , ಸಚ್ಚೇರಿಪೇಟೆಯ ಸಭಾಂಗಣದಲ್ಲಿ ಶಾಲಾ ಮಂತ್ರಿಮಂಡಲದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಡುಪಿ ಜಿಲ್ಲಾ ಮುಖ್ಯ ಆಯುಕ್ತರು ಹಾಗೂ ಲಯನ್ಸ್ ಜಿಲ್ಲೆ 317C ರ ಮಾಜಿ ಜಿಲ್ಲಾ ಗವರ್ನರ್ ಜಯಕರ್ ಶೆಟ್ಟಿ ಇಂದ್ರಾಳಿ ಅವರು ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂತ್ರಿಮಂಡಲದ ಪ್ರತಿಜ್ಞೆಯು ಕೇವಲ ಔಪಚಾರಿಕತೆಯಾಗಿರದೆ, ಅದರೊಂದಿಗೆ ಜವಾಬ್ದಾರಿಯೂ ಇರುತ್ತದೆ.

ಹೊಸದಾಗಿ ರಚನೆಗೊಂಡ ಮಂತ್ರಿಮಂಡಲವು ಶಾಲೆಯ ಅಭಿವೃದ್ಧಿಗೆ ಪೂರಕವಾಗುವ ಹೊಸ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಬೇಕು. ಹುದ್ದೆ ಯಾವುದೇ ಇರಲಿ ಅದು ಮುಖ್ಯವಲ್ಲ.ಶಾಲಾ ಮಂತ್ರಿ ಮಂಡಲದ ನಾಯಕನಾದವನು ಶಿಸ್ತಿನ ಗುಣಗಳನ್ನು ತನ್ನಲ್ಲಿ ಮೊದಲು ಮೈಗೂಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು‌ ಕರೆ ನೀಡಿ ನಾಯಕರಾಗಿ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಸಂಸ್ಥೆಯ ಗೌರವಾನ್ವಿತ ಸಂಚಾಲಕರಾದ ಲ. ಕೆ. ಸತ್ಯಶಂಕರ್ ಶೆಟ್ಟಿ ಅವರು ಮಾತನಾಡಿ, ನಾಯಕನಾದವನು ತಾನು ಬೆಳೆಯುವುದರ ಜೊತೆಗೆ ಇತರರನ್ನು ಬೆಳೆಸಲು ಪ್ರೇರೇಪಿಸಬೇಕು. ಜೊತೆಗೆ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ನಾಯಕರು ಆತ್ಮವಿಶ್ವಾಸ, ದೃಢನಿಶ್ಚಯ ಹಾಗೂ ನಂಬಿಕೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿ, ಮಂತ್ರಿಮಂಡಲಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಶಿಕ್ಷಕಿ ಶರ್ಮಿಳಾ ಅವರು ಮುಖ್ಯ ಅತಿಥಿಯವರ ಪರಿಚಯ ವಾಚಿಸಿದರು. ಸಹಶಿಕ್ಷಕಿ ಜಯಲಕ್ಷ್ಮೀ ನಾಯಕ್ ಅವರು ಮಂತ್ರಿಮಂಡಲಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು.

ಮುಖ್ಯ ಅತಿಥಿಗಳಾದ ಜಯಕರ್ ಶೆಟ್ಟಿ ಇಂದ್ರಾಳಿ ಅವರು ಮಂತ್ರಿಮಂಡಲದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವೇದಿಕೆಯಲ್ಲಿ ಲ.ಕ್ರಷ್ಣ ಶೆಟ್ಟಿ, ಮುಖ್ಯ ಶಿಕ್ಷಕರಾದ ಗೌರವ್ ಆರ್ ಕೆ, ಉಡುಪಿ ಜಿಲ್ಲಾ ಸ್ಕೌಟ್ ಗೈಡ್ ಮುಖ್ಯಸ್ಥೆ ಸುಮನ ಶೇಖರ್ ಮೇಡಮ್ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಮಂಜುವಾಣಿ ಕಾರ್ಯಕ್ರಮವನ್ನು ನಿರೂಪಿಸಿ, ಶೈಲಾ ಕೆ ಸ್ವಾಗತಿಸಿ , ಪ್ರತಿಮ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here