ದಕ್ಷಿಣ ಅಯೋಧ್ಯ ಎಂದೇ ಪ್ರಸಿದ್ಧಗೊಂಡ ಶ್ರೀ ಪರ್ತಗಾಳಿ ಜೀವೋತ್ತಮ ಕೇಂದ್ರ ಮಠದಲ್ಲಿ “ಜೀವೋತ್ತಮ ವಿದ್ಯಾಪೀಠಂ” ಉದ್ಘಾಟನೆ

0
67

ಪರ್ತಗಾಳಿ : ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಂಡ 77 ಅಡಿ ಎತ್ತರದ ಕಂಚಿನ ಶ್ರೀರಾಮ ಪ್ರತಿಮೆಯುಳ್ಳ ಪವಿತ್ರ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಕೇಂದ್ರ ಮಠದಲ್ಲಿ, ಪರಾಭವ ನಾಮ ಸಂವತ್ಸರದ ನಿಜ ಜೇಷ್ಠ ಶುಕ್ಲ ದಶಮಿಯ ಶುಭಸಂದರ್ಭವಾದ ಬುಧವಾರದಂದು, ಪರಮಪೂಜ್ಯ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೆಯರ್ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಹೊಸ ವೇದಾಧ್ಯಯನ ಕೇಂದ್ರವಾದ “ಜೀವೋತ್ತಮ ವಿದ್ಯಾಪೀಠಂ” ಉದ್ಘಾಟನೆಗೊಂಡಿತು.

ಕ್ರಿ.ಶ. 1475ರಲ್ಲಿ ಶ್ರೀ ಪಲಿಮಾರು ಮಠದ ಶ್ರೀ ರಾಮಚಂದ್ರತೀರ್ಥ ಶ್ರೀಪಾದಂಗಳವರಿಂದ ಸಂನ್ಯಾಸಾಶ್ರಮವನ್ನು ಸ್ವೀಕರಿಸಿದ ಶ್ರೀ ನಾರಾಯಣತೀರ್ಥ ಶ್ರೀಪಾದಂಗಳವರಿಂದ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು ಸ್ಥಾಪನೆಯಾಯಿತು. ಸುಮಾರು 550 ವರ್ಷಗಳ ನಿರಂತರ ಗುರುಪರಂಪರೆಯ ಮೂಲಕ ಶ್ರೀಮಧ್ವಾಚಾರ್ಯರ ದೈತ ಸಿದ್ಧಾಂತವನ್ನು ಪೋಷಿಸಿ, ಪ್ರಸಾರ ಮಾಡುತ್ತಿರುವ ಈ ಮಠವು ಪ್ರಸ್ತುತ ದೇಶಾದ್ಯಂತ ೩೪ ಶಾಖಾ ಮಠಗಳನ್ನು ಹೊಂದಿದೆ. ಮಠದ ಆರಾಧ್ಯ ದೇವರಾದ ಶ್ರೀ ರಾಮದೇವ ವೀರವಿಠಲ ದೇವರ ಅನುಗ್ರಹ ಹಾಗೂ ಸರ್ವ ಗುರುಪರಂಪರೆಯ ೨೩ ಯತಿಗಳ ಆಶೀರ್ವಾದದಿಂದ ವೈಷ್ಣವ ಸಂಪ್ರದಾಯದಂತೆ ಪ್ರತಿದಿನ ತಂತ್ರಸಾರೋಕ್ತ ತ್ರಿಕಾಲ ಪೂಜೆ ನಡೆಯುತ್ತಿದೆ.

ಸಾಂಪ್ರದಾಯಿಕ ಗುರುಕುಲ ಪದ್ಧತಿಯ ಮೂಲಕ ವೇದ ಹಾಗೂ ಶಾಸ್ತ್ರಗಳ ಅಧ್ಯಯನವು ಶತಮಾನಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿದೆ. ಮಠದ ೧೮ನೇ ಯತಿವರ್ಯರಾದ ಶ್ರೀಮದ್ ಪೂರ್ಣಪ್ರಜ್ಞ ತೀರ್ಥ ಶ್ರೀಪಾದಂಗಳವರು ವಿದ್ಯಾದಾನದ ಉದ್ದೇಶದಿಂದ ವಿಶೇಷ ಗುರುಕುಲವನ್ನು ಸ್ಥಾಪಿಸಿ ಸಮಾಜಕ್ಕೆ ಅನೇಕ ವಿದ್ವಾಂಸರು ಹಾಗೂ ಪಂಡಿತರನ್ನು ನೀಡುವ ಮೂಲಕ – ಸಮಾಜದ ಏಳಿಗೆಯಲ್ಲಿ ಮಹತ್ತರ ಸೇವೆ ಸಲ್ಲಿಸಿದ್ದರು.

1953ರಲ್ಲಿ ಮಠದ 22ನೇ ಯತಿವರ್ಯರಾದ ಶ್ರೀಮದ್ ದ್ವಾರಕಾನಾಥತೀರ್ಥ ಶ್ರೀಪಾದಂಗಳವರು ಗೋವಾದ ಡಿಚೋಲಿಯ ವ್ಯಾಸಾಶ್ರಮದಲ್ಲಿ ಪ್ರಾಚೀನ ಗುರುಕುಲ ಪದ್ಧತಿಯನ್ನು ಅನುಸರಿಸಿ “ಶ್ರೀ ಇಂದಿರಾಕಾಂತತೀರ್ಥ ಸಂಸ್ಕೃತ ಪಾಠಶಾಲೆ”ಯನ್ನು ಸ್ಥಾಪಿಸಿದರು. ಬಳಿಕ ಅದನ್ನು ಕರ್ನಾಟಕದ ವೆಂಕಟಾಪುರಕ್ಕೆ ಸ್ಥಳಾಂತರಿಸಲಾಯಿತು. ಈ ಪಾಠಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಸಾಹಿತ್ಯ, ಕಾವ್ಯ, ವ್ಯಾಕರಣ, ವೇದ ಹಾಗೂ ದೈತಸಿದ್ಧಾಂತ ಸೇರಿದಂತೆ ವಿವಿಧ ಸಾಂಪ್ರದಾಯಿಕ ವಿಷಯಗಳನ್ನು ಬೋಧಿಸಲಾಗುತ್ತಿದ್ದು, ವಿದ್ಯಾರ್ಥಿಗಳ ಸಂಪೂರ್ಣ ವೆಚ್ಚವನ್ನು ಮಠವೇ ಭರಿಸುತ್ತಿತ್ತು.

ನಂತರ ೧೯೭೨ರಲ್ಲಿ ಮಠದ ೨೩ನೇ ಯತಿವರ್ಯರಾದ ಶ್ರೀಮದ್ ವಿದ್ಯಾಧಿರಾಜತೀರ್ಥ ಶ್ರೀಪಾದಂಗಳವರು ಪಾಠಶಾಲೆಯನ್ನು ಪರ್ತಗಾಳಿಗೆ ಸ್ಥಳಾಂತರಿಸಿ “ಜೀವೋತ್ತಮ ವೈದಿಕ ಸಂಸ್ಕೃತ ಪಾಠಶಾಲೆ” ಎಂದು ನಾಮಕರಣ ಮಾಡಿದರು. ಈ ಸಂಸ್ಥೆಯ ಮೂಲಕ ಐನೂರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸಮಾಜದಲ್ಲಿ ಗೌರವಯುತ ಜೀವನವನ್ನು ನಡೆಸಿದ್ದಾರೆ. ಆದರೆ ಆಧುನಿಕ ಶಿಕ್ಷಣದ ಪ್ರಭಾವದಿಂದ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಾ ಬಂದ ಪರಿಣಾಮ, ೨೦೧೬ರ ವೇಳೆಗೆ ಪ್ರವೇಶ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿತ್ತು.

ಇತ್ತೀಚಿನ ದಿನಗಳಲ್ಲಿ ವೇದಾಧ್ಯಯನದ ಬಗ್ಗೆ ಸಮಾಜದಲ್ಲಿ ಪುನಃ ಆಸಕ್ತಿ ಮೂಡುತ್ತಿರುವ ಹಿನ್ನೆಲೆಯಲ್ಲಿ, ಮಠದ ೨೪ನೇ ಯತಿವರ್ಯರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೆಯರ್ ಸ್ವಾಮೀಜಿಯವರು “ಜೀವೋತ್ತಮ ವಿದ್ಯಾಪೀಠಂ” ಎಂಬ ಹೆಸರಿನಲ್ಲಿ ಈ ವಿದ್ಯಾಸಂಸ್ಥೆಯನ್ನು ಪುನಶ್ಚತನಗೊಳಿಸುವ ಮೂಲಕ ನವಚೈತನ್ಯ ತುಂಬಿದ್ದಾರೆ.

ಈ ಸಂದರ್ಭದಲ್ಲಿ ಶ್ರೀಪಾದರು ವಿದ್ಯಾರ್ಥಿಗಳು ಹಾಗೂ ಭಕ್ತಾದಿಗಳನ್ನು ಉದ್ದೇಶಿಸಿ ಅನುಗ್ರಹ ಆಶೀರ್ವಚನ ನೀಡಿದರು. “ಈ ವಿದ್ಯಾಪೀಠವು ಹಿಂದೂ ಸನಾತನ ಧರ್ಮದ ಸಂರಕ್ಷಣೆಯ ದೃಷ್ಟಿಯಿಂದ ಶ್ರೀಮಧ್ವ ಸಿದ್ಧಾಂತವನ್ನು ಅನುಸರಿಸುವ ವೇದಾಧ್ಯಯನದ ಕೇಂದ್ರಬಿಂದುವಾಗಿದೆ. ಐದು ವರ್ಷಗಳ ಪಠ್ಯಕ್ರಮದಲ್ಲಿ ಸಂಸ್ಕೃತ, ವೇದ, ಕರ್ಮಾಂಗ ಹಾಗೂ ಜ್ಯೋತಿಷ್ಯ ವಿಷಯಗಳಿಗೆ ಪ್ರಾಧಾನ್ಯ ನೀಡಲಾಗುವುದು. ಹತ್ತು ವರ್ಷಗಳ ಪಠ್ಯಕ್ರಮದಲ್ಲಿ ಸಂಸ್ಕೃತ, ವೇದ, ಕರ್ಮಾಂಗ, ಜ್ಯೋತಿಷ್ಯ, ನ್ಯಾಯ, ವ್ಯಾಕರಣ ಹಾಗೂ ವೇದಾಂತ ವಿಷಯಗಳ ಸಮಗ್ರ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುವುದು” ಎಂದು ತಿಳಿಸಿದರು.

ವಿದ್ಯಾಪೀಠದ ಸಂಸ್ಕೃತ ವಿಭಾಗಕ್ಕೆ ಶ್ರೀ ಗಣೇಶ್ ಭಟ್ ಗೋಕರ್ಣ ಹಾಗೂ ಶ್ರೀ ರಘೋತ್ತಮ ಆಚಾರ್ಯ ಬೆಂಗಳೂರು ಅವರನ್ನು, ವೇದ ವಿಭಾಗಕ್ಕೆ ಶ್ರೀ ಅಥರ್ವ ಭಾಂಡೆಕರ್ ಅವರನ್ನು ಹಾಗೂ ಮುಖ್ಯೋಪಾಧ್ಯಾಯರಾಗಿ ಜ್ಯೋತಿಷ್ಯ ಮತ್ತು ಕರ್ಮಾಂಗ ವಿಭಾಗಕ್ಕೆ ಹೊನ್ನಾವರದ ಇಡಗುಂಜಿಯ ಶ್ರೀ ಲಕ್ಷ್ಮೀಕಾಂತ ಭಟ್ ಅವರನ್ನು ನಿಯೋಜಿಸಲಾಗಿದೆ.

ಈ ಪಾಠಶಾಲೆಯ ಮೂಲಕ ವಿದ್ವತ್ ಹಾಗೂ ವಿದ್ವಾನ್ ಶಿಕ್ಷಣವನ್ನು ಪಡೆದು ಶ್ರೀಮಧ್ವ ಸಿದ್ಧಾಂತದ ಪ್ರಚಾರ ಹಾಗೂ ಸಾರಸ್ವತ ಸಮಾಜದ ಸೇವೆಯಲ್ಲಿ ತೊಡಗುವ ಉತ್ತಮ ಪಂಡಿತರನ್ನು ರೂಪಿಸುವ ಗುರಿಯನ್ನು ಹೊಂದಲಾಗಿದೆ.

ಇದು ಕೇವಲ ಒಂದು ಶಿಕ್ಷಣ ಸಂಸ್ಥೆಯ ಆರಂಭವಲ್ಲ; ಸನಾತನ ವೈದಿಕ ಪರಂಪರೆ, ಶ್ರೀಮಧ್ವ ಸಿದ್ಧಾಂತ ಹಾಗೂ ಗುರುಪರಂಪರೆಯ ಜ್ಞಾನಸಂಪತ್ತನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿ ಪಸರಿಸುವ ಮಹತ್ವದ ಹೆಜ್ಜೆಯಾಗಿದೆ. ಗುರುಪರಂಪರೆಯಿಂದ ಪಾವನಗೊಂಡ ಪರ್ತಗಾಳಿ ಕ್ಷೇತ್ರದಲ್ಲಿ ಆರಂಭಗೊಂಡಿರುವ ಈ ವಿದ್ಯಾಪೀಠವು ಭವಿಷ್ಯದಲ್ಲಿ ಅನೇಕ ವೇದಪಂಡಿತರು, ಶಾಸ್ತ್ರಪಾರಂಗತರು ಹಾಗೂ ಸಮಾಜಮುಖಿ ವ್ಯಕ್ತಿತ್ವಗಳನ್ನು ರೂಪಿಸುವ ಕೇಂದ್ರವಾಗಿ ಬೆಳೆಯಲಿ ಎಂದು ಶ್ರೀಪಾದರು ಆಶೀರ್ವದಿಸಿದರು.

ಶ್ರೀ ಹರಿ ಗುರು ಮತ್ತು ಸರಸ್ವತಿ ಪೂಜೆಯ ಬಳಿಕ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಹಾಗೂ ಅಗತ್ಯ ಶಿಕ್ಷಣೋಪಕರಣಗಳನ್ನು ವಿತರಿಸುವ ಮೂಲಕ ವಿದ್ಯಾಪೀಠದ ಶುಭಾರಂಭಕ್ಕೆ ಅನುಗ್ರಹ ನೀಡಲಾಯಿತು.

ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಶ್ರೀ ಮೋಹನದಾಸ್ ಪೈ, ಶ್ರೀ ಆರ್. ಎಸ್. ಶಾನುಭಾಗ್ (ಬೆಂಗಳೂರು), ಶ್ರೀ ಮಠದ ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ಶ್ರೀನಿವಾಸ್ ವಿ. ದೆಂಪೋ, ಉಪಾಧ್ಯಕ್ಷ ಶ್ರೀ ರಾಮಚಂದ್ರ ಆರ್. ಕಾಮತ್, ಪರ್ತಗಾಳಿ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಶ್ರೀ ಅನಿಲ್ ಪೈ, ಸಮಿತಿ ಸದಸ್ಯರಾದ ಶ್ರೀ ದಿನೇಶ್ ಪೈ ಹಾಗೂ ಶ್ರೀ ಯೋಗೀಶ್ ಕಾಮತ್, ವಿದ್ವಾನ್ ಶ್ರೀ ರಾಮಕೃಷ್ಣ ಭಟ್, ಪಾಠಶಾಲೆಯ ಹಳೆಯ ವಿದ್ಯಾರ್ಥಿಗಳು, ಶ್ರೀ ಜೀವೋತ್ತಮ ವೈದಿಕ ಸಂಘದ ಸದಸ್ಯರು, ವೈದಿಕ ವೃಂದ ಹಾಗೂ ಸಮಾಜಬಾಂಧವರು ಉಪಸ್ಥಿತರಿದ್ದರು. ಈ ಪ್ರಕಟಣೆಯನ್ನು ಶ್ರೀ ಮಠದ ಸಾಮಾಜಿಕ ಮಾಧ್ಯಮ ತಂಡವು ನೀಡಿದೆ.

LEAVE A REPLY

Please enter your comment!
Please enter your name here