ವಿಟ್ಲ : ವನ್ಯಜೀವಿ ಉತ್ಪನ್ನವಾಗಿರುವ ಅಮೂಲ್ಯ ಅಂಬರ್‌ಗ್ರೀಸ್ (ತಿಮಿಂಗಿಲ ವಾಂತಿ) ಅನ್ನು ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಅಂಬರ್‌ಗ್ರೀಸ್ ಸೇರಿದಂತೆ ಸ್ಕೂಟರ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮುಗುಳಿ ಮನೆ ನಿವಾಸಿ ಕುಮುದಾಕ್ಷ (27) ಹಾಗೂ ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ನಿವಾಸಿ ಧನು ಕುಮಾರ್ (32) ಎಂದು ಗುರುತಿಸಲಾಗಿದೆ.
ಜೂನ್ 24ರ ರಾತ್ರಿ ವಿಟ್ಲ ಪೊಲೀಸ್ ಉಪನಿರೀಕ್ಷಕ (ಕಾನೂನು ಮತ್ತು ಸುವ್ಯವಸ್ಥೆ) ರಾಮಕೃಷ್ಣ ಅವರು ಸಿಬ್ಬಂದಿಯೊಂದಿಗೆ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ, ಜೂನ್ 25ರ ಮುಂಜಾನೆ ಸುಮಾರು 12.15ಕ್ಕೆ ಖಚಿತ ಮಾಹಿತಿ ಲಭಿಸಿತ್ತು. ಮಾಮೇಶ್ವರದಿಂದ ಕಂಬಳಬೆಟ್ಟು ರಸ್ತೆಯ ಮೂಲಕ ಇಬ್ಬರು ಸ್ಕೂಟರ್‌ನಲ್ಲಿ ಅಂಬರ್‌ಗ್ರೀಸ್ ಮಾದರಿಯನ್ನು ತೋರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಬರುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ, ಬೋಳಂತಿಮೊಗರು ಪ್ರದೇಶದಲ್ಲಿ ಪೊಲೀಸರು ಬಲೆ ಬೀಸಿದರು.
ಮುಂಜಾನೆ ಸುಮಾರು 1 ಗಂಟೆಗೆ ಸ್ಕೂಟರ್‌ನಲ್ಲಿ ಆಗಮಿಸಿದ ಆರೋಪಿಗಳಿಗೆ ಪೊಲೀಸರು ನಿಲ್ಲುವಂತೆ ಸೂಚಿಸಿದಾಗ, ಅವರು ವಾಹನವನ್ನು ಹಿಂದಕ್ಕೆ ತಿರುಗಿಸಿ ಪರಾರಿಯಾಗಲು ಯತ್ನಿಸಿದರು. ಆದರೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನೂ ಸುತ್ತುವರಿದು ವಶಕ್ಕೆ ಪಡೆದರು.
ತಪಾಸಣೆ ವೇಳೆ ಆರೋಪಿ ಕುಮುದಾಕ್ಷನ ಬಳಿಯಿದ್ದ ಪ್ಲಾಸ್ಟಿಕ್ ಕವರ್‌ನಲ್ಲಿ ಅಂಬರ್‌ಗ್ರೀಸ್ ಪತ್ತೆಯಾಯಿತು. ಪ್ರಾಥಮಿಕ ವಿಚಾರಣೆಯಲ್ಲಿ ಈ ವಸ್ತುವನ್ನು ರಾಜೇಶ್ ಹಾಗೂ ಚಂದ್ರಮೋಹನ್ ಎಂಬವರು ನೀಡಿದ್ದರು ಎಂದು ಆರೋಪಿಗಳು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ಅಂಬರ್‌ಗ್ರೀಸ್, ಎರಡು ಮೊಬೈಲ್ ಫೋನ್‌ಗಳು ಹಾಗೂ ಕೆಎ-19-ಎಚ್‌ಆರ್-8680 ಸಂಖ್ಯೆಯ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ಲಕ್ಷಾಂತರ ರೂಪಾಯಿಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಕಲಂ 51 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 3(5) ಅಡಿಯಲ್ಲಿ ಪ್ರಕರಣ (ಅ.ಕ್ರ. 140/2026) ದಾಖಲಿಸಲಾಗಿದ್ದು, ಅಕ್ರಮ ಜಾಲದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

