ಉಡುಪಿ : ಜಿಲ್ಲೆಯ ಪರ್ಕಳದ ಕೆಳಪರ್ಕಳ ರಾಷ್ಟ್ರೀಯ ಹೆದ್ದಾರಿ (NH-169A) ಯಲ್ಲಿರುವ ಕೆನರಾ ಬ್ಯಾಂಕ್ ತಿರುವಿನಲ್ಲಿ ಕಂಟೇನರ್ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಆತ್ರಾಡಿಯಿಂದ ಪೇಪರ್ ಬಾಕ್ಸ್‌ಗಳನ್ನು ತುಂಬಿಕೊಂಡು ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಕಂಟೇನರ್ ಲಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚಿ ಬಿದ್ದಿದೆ. ಅಪಘಾತದ ಪರಿಣಾಮ ಲಾರಿಯಿಂದ ಡೀಸೆಲ್ ಸೋರಿಕೆಯಾಗಿದ್ದು, ಪರಿಸರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿ, ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲಕ್ಕೆತ್ತಿದರು. ಬಳಿಕ ಸಂಚಾರವನ್ನು ಸುಗಮಗೊಳಿಸಲಾಯಿತು.
ಸ್ಥಳೀಯರ ಪ್ರಕಾರ, ಪರ್ಕಳದ ಈ ತಿರುವಿನಲ್ಲಿ ಭಾರೀ ವಾಹನಗಳು ಕೆಟ್ಟು ನಿಲ್ಲುವುದು, ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗುವುದು ಪದೇಪದೇ ನಡೆಯುತ್ತಿದ್ದು, ಇದು ಅಪಘಾತಗಳ ತಾಣವಾಗಿ ಮಾರ್ಪಟ್ಟಿದೆ. ಎರಡು ದಿನಗಳ ಹಿಂದಷ್ಟೇ ಇದೇ ಏರು ರಸ್ತೆಯಲ್ಲಿ ಲಾರಿಯೊಂದು ಕೆಟ್ಟು ನಿಂತು ವಾಹನ ಸವಾರರು ಪರದಾಡಿದ್ದರು ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ, ಈ ಮಾರ್ಗದಲ್ಲಿ ನಿತ್ಯವೂ ಸಂಚರಿಸುವ ರೆಡಿ ಮಿಕ್ಸ್ ವಾಹನಗಳಿಂದ ರಸ್ತೆಯ ಮೇಲೆ ಜೆಲ್ಲಿ ಹಾಗೂ ಕಾಂಕ್ರೀಟ್ ಮಿಶ್ರಣ ಬೀಳುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಸೇರಿದಂತೆ ಸಾರ್ವಜನಿಕರಿಗೆ ಅಪಾಯ ಹೆಚ್ಚುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಕೂಡಲೇ ಹಳೆಯ ರಸ್ತೆಯನ್ನಾದರೂ ಅಭಿವೃದ್ಧಿಪಡಿಸಿ, ಅಪಘಾತಗಳಿಗೆ ಕಡಿವಾಣ ಹಾಕುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

