ನಂಜನಗೂಡು : ಕಾಡಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದ ಜಿಂಕೆಯೊಂದು ಬೀದಿ ನಾಯಿಗಳ ದಾಳಿಗೆ ಒಳಗಾದ ಘಟನೆ ತಾಲ್ಲೂಕಿನ ಹೆಡತಲೆ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ಯುವಕರು ಸಮಯಪ್ರಜ್ಞೆಯಿಂದ ಕಾರ್ಯಪ್ರವೃತ್ತರಾಗಿ ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಹೆಡತಲೆ ಗ್ರಾಮದ ಹೊರವಲಯದ ಹೊಲದ ಕಡೆಗೆ ಕಾಡಿನಿಂದ ಜಿಂಕೆಯೊಂದು ಬಂದಿತ್ತು. ಜಿಂಕೆಯನ್ನು ಗಮನಿಸಿದ ಬೀದಿ ನಾಯಿಗಳ ಗುಂಪು ಅದನ್ನು ಹಿಂಬಾಲಿಸಿ ದಾಳಿ ನಡೆಸಿದೆ. ನಾಯಿಗಳು ಜಿಂಕೆಯ ಕಣ್ಣು, ತಲೆ, ಹೊಟ್ಟೆ ಹಾಗೂ ಕುತ್ತಿಗೆ ಭಾಗಗಳನ್ನು ಕಚ್ಚಿರುವ ಗುರುತುಗಳು ಸ್ಪಷ್ಟವಾಗಿ ಕಂಡುಬಂದಿವೆ.
ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ ಜಿಂಕೆ ಸಮೀಪದ ಬಾವಿಗೆ ಬಿದ್ದಿದೆ. ಇದನ್ನು ಕಂಡ ಸ್ಥಳೀಯ ಯುವಕರು ತಕ್ಷಣ ಸ್ಥಳಕ್ಕೆ ಧಾವಿಸಿ ಕಲ್ಲು ಹಾಗೂ ಕೋಲುಗಳ ಸಹಾಯದಿಂದ ನಾಯಿಗಳನ್ನು ಓಡಿಸಿ ಜಿಂಕೆಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಯುವಕರು ಕೂಡಲೇ ನಂಜನಗೂಡು ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಗಾಯಗೊಂಡ ಜಿಂಕೆಗೆ ಪ್ರಥಮ ಚಿಕಿತ್ಸೆ ನೀಡಿ ಮುಂದಿನ ಚಿಕಿತ್ಸೆಗೆ ಕೇಂದ್ರಕ್ಕೆ ರವಾನಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ಕಾಡಿನಿಂದ ಜಿಂಕೆಗಳು ಹೊಲ-ಗದ್ದೆಗಳ ಕಡೆಗೆ ಆಗಾಗ್ಗೆ ಬರುತ್ತಿದ್ದರೂ, ಬೀದಿ ನಾಯಿಗಳ ದಾಳಿಗೆ ಒಳಗಾಗುವ ಘಟನೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ನಿಯಂತ್ರಣ ಹಾಗೂ ಕಾಡುಪ್ರಾಣಿಗಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಗಾಯಗೊಂಡ ಜಿಂಕೆಯನ್ನು ರಕ್ಷಿಸಿದ ಯುವಕರ ಮಾನವೀಯ ಕಾರ್ಯಕ್ಕೆ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

