ಉಡುಪಿ : ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಾಜಿದ್ದ ನಿವಾಸಿಗಳು, ರೈತರು ಹಾಗೂ ಸಾರ್ವಜನಿಕರು ಹಲವು ತಿಂಗಳುಗಳಿಂದ ಎದುರಿಸುತ್ತಿದ್ದ ಕಾಂಕ್ರೀಟ್ ರಸ್ತೆಯ ಬಿರುಕು ಮತ್ತು ಕುಸಿತದ ಸಮಸ್ಯೆಗೆ ಕೊನೆಗೂ ಪರಿಹಾರ ದೊರೆತಿದೆ. ಅಪಾಯಕಾರಿಯಾಗಿ ಬಿರುಕು ಬಿಟ್ಟಿದ್ದ ರಸ್ತೆಯನ್ನು ಇದೀಗ ಬೃಹತ್ ಕಲ್ಲು ಬಂಡೆಗಳನ್ನು ಅಳವಡಿಸಿ ಭದ್ರಪಡಿಸಲಾಗಿದ್ದು, ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಈ ರಸ್ತೆ ಸಂಪೂರ್ಣವಾಗಿ ಬಿರುಕು ಬಿಟ್ಟು ಕುಸಿಯುವ ಹಂತ ತಲುಪಿದ್ದನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರು ಸಮಸ್ಯೆಯನ್ನು ಸಂಬಂಧಪಟ್ಟ ಶಾಸಕರು, ವಾರಾಹಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಆಡಳಿತ ಹಾಗೂ ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದಿದ್ದರು. ಅಲ್ಲದೆ, ಪತ್ರಿಕೆಗಳ ಮೂಲಕವೂ ಸಮಸ್ಯೆಯನ್ನು ನಿರಂತರವಾಗಿ ಪ್ರಸ್ತಾಪಿಸಿ ಅಧಿಕಾರಿಗಳ ಗಮನ ಸೆಳೆದಿದ್ದರು.
ಈ ಮೊದಲು ಈ ಕಾಂಕ್ರೀಟ್ ರಸ್ತೆ ಬಿಲ್ಕುಬಿಟ್ಟ ಸಂದರ್ಭದಲ್ಲಿ ಚಿತ್ರ

ಅವರ ನಿರಂತರ ಹೋರಾಟ ಮತ್ತು ಮನವಿಗಳ ಫಲವಾಗಿ, ರಸ್ತೆ ಬದಿಯ ಕುಸಿತ ಪ್ರದೇಶಕ್ಕೆ ಬೃಹತ್ ಗಾತ್ರದ ಕಲ್ಲುಗಳನ್ನು ಹಾಕಿ ರಸ್ತೆ ಭದ್ರಪಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ ಈ ರಸ್ತೆಯನ್ನು ಅವಲಂಬಿಸಿರುವ ರೈತರು, ನಿವಾಸಿಗಳು ಹಾಗೂ ಸಾರ್ವಜನಿಕರು ಇದೀಗ ಯಾವುದೇ ಆತಂಕವಿಲ್ಲದೆ ಸಂಚರಿಸುವಂತಾಗಿದೆ.
ಈ ಸಮಸ್ಯೆ ಪರಿಹಾರವಾಗಲು ಸಾಮಾಜಿಕ ಕಳಕಳಿಯಿಂದ ಶ್ರಮಿಸಿದ ಸತೀಶ್ ಪೂಜಾರಿ ಕೀಳಂಜೆ ಅವರ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ. ಜೊತೆಗೆ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿದ ಶಾಸಕ ಯಶ್ಪಾಲ್ ಸುವರ್ಣ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಸ್ಥಳೀಯ ಪಂಚಾಯಿತಿ ಆಡಳಿತಕ್ಕೂ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಅವಿನಾಶ್ ಶೆಟ್ಟಿ (ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು), ಸಿರಿಲ್ ಡಿಸೋಜ (ಮಾಜಿ ಸದಸ್ಯರು), ರಿನೇಶ್ ಪೂಜಾರಿ ಮಾಯಾಡಿ, ಅರುಣ್ ಪೂಜಾರಿ ಮಾಯಾಡಿ, ಕಿಶೋರ್ ಸಾಲ್ಮರ ಹಾಗೂ ತುಳುನಾಡ ರಕ್ಷಣೆ ವೇದಿಕೆಯ ಉಪಾಧ್ಯಕ್ಷ ಉಮೇಶ್ ಶೆಟ್ಟಿ ನಡುಮನೆ ಸೇರಿದಂತೆ ಸ್ಥಳೀಯರು ರಸ್ತೆ ದುರಸ್ತಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

