ನವದೆಹಲಿ: ಭಾರತೀಯ ಭೂಸೇನೆಯಲ್ಲಿ 4 ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಜನರಲ್ ಉಪೇಂದ್ರ ದ್ವಿವೇದಿ ಅವರ ಉತ್ತರಾಧಿಕಾರಿಯಾಗಿ ಜನರಲ್ ಧೀರಜ್ ಸೇಠ್ ಮಂಗಳವಾರ ಭಾರತದ 31ನೇ ಭೂಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಜನರಲ್ ಧೀರಜ್ ಸೇಠ್ ಭೂಸೇನೆಯ ಉಪಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಆರ್ಮರ್ಡ್ ಕಾರ್ಪ್ಸ್ (ಟ್ಯಾಂಕ್ ರೆಜಿಮೆಂಟ್) ವಿಭಾಗದ ಅಧಿಕಾರಿಯಾಗಿರುವ ಇವರು, 1997ರಲ್ಲಿ ನಿವೃತ್ತರಾದ ಜನರಲ್ ಶಂಕರ್ ರಾಯ್ ಚೌಧರಿ ಅವರ ನಂತರ ಕಳೆದ ಮೂರು ದಶಕಗಳಲ್ಲಿ ಈ ಅತ್ಯುನ್ನತ ಹುದ್ದೆಗೇರಿದ ಮೊದಲ ಆರ್ಮರ್ಡ್ ಕಾರ್ಪ್ಸ್ ಅಧಿಕಾರಿಯಾಗಿದ್ದಾರೆ.
ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಇಂದ ಪದವಿ ಪಡೆದು ಡಿಸೆಂಬರ್ 1986ರಲ್ಲಿ ಸೇನೆಗೆ ಸೇರಿದ ಜನರಲ್ ಧೀರಜ್ ಸೇಠ್ ಅವರಿಗೆ ಸುಮಾರು 40 ವರ್ಷಗಳ ಮಿಲಿಟರಿ ಅನುಭವವಿದೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ದೇಶಾದ್ಯಂತ ಹಲವು ಪ್ರಮುಖ ಕಾರ್ಯಾಚರಣೆ, ಕಮಾಂಡ್ ಮತ್ತು ಸ್ಟಾಫ್ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಅವರು ಆರ್ಮರ್ಡ್ ರೆಜಿಮೆಂಟ್, ಆರ್ಮರ್ಡ್ ಬ್ರಿಗೇಡ್, ಸ್ಟ್ರೈಕ್ ಕಾರ್ಪ್ಸ್ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ನಿಯೋಜಿಸಲಾದ ಪಡೆಗಳ ನೇತೃತ್ವ ವಹಿಸಿದ್ದರು. ಅಲ್ಲದೆ, ಭಾರತದ ಪಶ್ಚಿಮ ಗಡಿಯ ರಕ್ಷಣೆಯ ಜವಾಬ್ದಾರಿ ಹೊಂದಿರುವ ಕಾರ್ಯತಂತ್ರದ ಪ್ರಮುಖ ಕಮಾಂಡ್‌ಗಳಾದ ಸದರ್ನ್ ಕಮಾಂಡ್ ಮತ್ತು ಸೌತ್ ವೆಸ್ಟರ್ನ್ ಕಮಾಂಡ್ ಎರಡನ್ನೂ ಮುನ್ನಡೆಸಿದ್ದಾರೆ.
4 ದಶಕಗಳ ಕಾಲ ಸೇವೆ ಸಲ್ಲಿಸಿರುವ ಇವರು, ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ಜೈಪುರ ಮೂಲದ ಸೌತ್ ವೆಸ್ಟರ್ನ್ ಕಮಾಂಡ್ ಮತ್ತು ಪುಣೆ ಮೂಲದ ಸದರ್ನ್ ಕಮಾಂಡ್ ಹೀಗೆ ಎರಡು ಪ್ರಮುಖ ಕಾರ್ಯಾಚರಣೆಯ ಕಮಾಂಡ್‌ಗಳ ನೇತೃತ್ವ ವಹಿಸಿದ ಅಪರೂಪದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ವಿಶಿಷ್ಟ ಸೇವೆಗಾಗಿ ಪರಮ ವಿಶಿಷ್ಟ ಸೇವಾ ಪದಕ (PVSM), ಉತ್ತಮ ಯುದ್ಧ ಸೇವಾ ಪದಕ (UYSM) ಮತ್ತು ಅತಿ ವಿಶಿಷ್ಟ ಸೇವಾ ಪದಕಗಳನ್ನು (AVSM) ನೀಡಿ ಗೌರವಿಸಲಾಗಿದೆ.

