ಬೆಂಗಳೂರು : ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಬಯಸುವ ಪದವೀಧರರಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS), ಪ್ರೊಬೆಷನರಿ ಆಫೀಸರ್ (PO)/ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದ್ದು, ದೇಶದ 11 ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಟ್ಟು 6,715 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
ಅಧಿಕೃತ ವೆಬ್‌ಸೈಟ್‌ನಲ್ಲಿ ಜುಲೈ 1ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 21, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕಳೆದ ವರ್ಷ 5,208 ಹುದ್ದೆಗಳಿದ್ದರೆ, ಈ ಬಾರಿ ಹುದ್ದೆಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ: ಜುಲೈ 1, 2026
- ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 21, 2026
- ಪ್ರಿಲಿಮ್ಸ್ ಪರೀಕ್ಷೆ: ಆಗಸ್ಟ್ 2026
- ಮೇನ್ಸ್ ಪರೀಕ್ಷೆ: ಅಕ್ಟೋಬರ್ 2026
- ಪರ್ಸನಾಲಿಟಿ ಟೆಸ್ಟ್: ನವೆಂಬರ್ 2026
- ಸಂದರ್ಶನ: ನವೆಂಬರ್/ಡಿಸೆಂಬರ್ 2026
- ತಾತ್ಕಾಲಿಕ ಆಯ್ಕೆ ಪಟ್ಟಿ: ಜನವರಿ 2027
ಯಾವ ಬ್ಯಾಂಕ್‌ನಲ್ಲಿ ಎಷ್ಟು ಹುದ್ದೆಗಳು?
ನೇಮಕಾತಿಯಲ್ಲಿ ಬ್ಯಾಂಕ್ ಆಫ್ ಬರೋಡಾ (1,900), ಕೆನರಾ ಬ್ಯಾಂಕ್ (1,500), ಬ್ಯಾಂಕ್ ಆಫ್ ಮಹಾರಾಷ್ಟ್ರ (1,100), ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (550), ಪಂಜಾಬ್ ನ್ಯಾಷನಲ್ ಬ್ಯಾಂಕ್ (504), ಬ್ಯಾಂಕ್ ಆಫ್ ಇಂಡಿಯಾ (500), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (500) ಹಾಗೂ ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್ (161) ಸೇರಿದಂತೆ ಒಟ್ಟು 11 ಸಾರ್ವಜನಿಕ ಬ್ಯಾಂಕುಗಳು ಭಾಗವಹಿಸಿವೆ.
ಅರ್ಹತೆ ಮತ್ತು ವಯೋಮಿತಿ
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಜುಲೈ 1, 2026ಕ್ಕೆ ಅನ್ವಯವಾಗುವಂತೆ 20ರಿಂದ 30 ವರ್ಷ ವಯೋಮಿತಿಯೊಳಗಿರಬೇಕು. ಎಸ್‌ಸಿ/ಎಸ್‌ಟಿ, ಒಬಿಸಿ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ
- SC/ST/PwBD: ₹175
- ಸಾಮಾನ್ಯ/OBC/EWS: ₹850
ವೇತನ ಮತ್ತು ಆಯ್ಕೆ ಪ್ರಕ್ರಿಯೆ
ಆಯ್ಕೆಯಾದ ಅಭ್ಯರ್ಥಿಗಳಿಗೆ ₹48,480 ಮೂಲ ವೇತನದೊಂದಿಗೆ ವಿವಿಧ ಭತ್ಯೆಗಳು ದೊರೆಯಲಿವೆ.
ಆಯ್ಕೆ ಪ್ರಕ್ರಿಯೆಯು ಪ್ರಿಲಿಮ್ಸ್, ಮೇನ್ಸ್, ಪರ್ಸನಾಲಿಟಿ ಟೆಸ್ಟ್ ಹಾಗೂ ಸಂದರ್ಶನ ಒಳಗೊಂಡಿದೆ. ಪ್ರಿಲಿಮ್ಸ್ ಪರೀಕ್ಷೆಯಲ್ಲಿ 100 ಪ್ರಶ್ನೆಗಳಿಗೆ 100 ಅಂಕಗಳಿದ್ದು, 60 ನಿಮಿಷ ಸಮಯ ನೀಡಲಾಗುತ್ತದೆ. ಮೇನ್ಸ್ ಪರೀಕ್ಷೆಯಲ್ಲಿ 200 ಅಂಕಗಳ ವಸ್ತುನಿಷ್ಠ ಪ್ರಶ್ನೆಗಳ ಜೊತೆಗೆ 25 ಅಂಕಗಳ ಇಂಗ್ಲಿಷ್ ವಿವರಣಾತ್ಮಕ ಪರೀಕ್ಷೆ ಇರುತ್ತದೆ. ಎರಡೂ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ 0.25 ಅಂಕಗಳ ನೆಗೆಟಿವ್ ಮಾರ್ಕಿಂಗ್ ಅನ್ವಯವಾಗಲಿದೆ.
ಮೇನ್ಸ್‌ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಪರ್ಸನಾಲಿಟಿ ಟೆಸ್ಟ್ ಹಾಗೂ ನಂತರ 100 ಅಂಕಗಳ ಸಂದರ್ಶನ ನಡೆಯಲಿದ್ದು, ಅಂತಿಮ ಆಯ್ಕೆ ಮೆರಿಟ್ ಆಧಾರದಲ್ಲಿ ಮಾಡಲಾಗುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

