ಕನ್ನಡ ಭಾಷೆ-ಸಂಸ್ಕೃತಿ ಉಳಿವಿಗೆ ಕೇರಳ ಕನ್ನಡ ಅಕಾಡೆಮಿ ಅಗತ್ಯ : ಶಿವರಾಮ ಕಾಸರಗೋಡು

0
7

ಕಾಸರಗೋಡು : ಕೇರಳ ರಾಜ್ಯದ ಕನ್ನಡಿಗರ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಕಾಸರಗೋಡಿನಲ್ಲಿ ಪ್ರತ್ಯೇಕ ಅಸ್ತಿತ್ವವುಳ್ಳ ‘ಕೇರಳ ಕನ್ನಡ ಅಕಾಡೆಮಿ’ಯನ್ನು ಸ್ಥಾಪಿಸಬೇಕೆಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮತ್ತೊಮ್ಮೆ ಕೇರಳ ಸರ್ಕಾರವನ್ನು ಆಗ್ರಹಿಸಿದೆ.

ಈ ಸಂಬಂಧ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಮನವಿ ಸಲ್ಲಿಸಿದ್ದು, ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಭಾಷಾ ಅಲ್ಪಸಂಖ್ಯಾತರ ಆಯುಕ್ತರು (ದಿನಾಂಕ: 23-06-2026) ಸಹ ಕೇರಳ ಸರ್ಕಾರಕ್ಕೆ ಶಿಫಾರಸು ಪತ್ರ ಕಳುಹಿಸಿರುವುದಾಗಿ ತಿಳಿಸಿದ್ದಾರೆ.

ಮನವಿಯಲ್ಲಿ, ಕೇರಳದಲ್ಲಿ ನೆಲೆಸಿರುವ ಕನ್ನಡಿಗರ ಹಕ್ಕುಗಳ ರಕ್ಷಣೆ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂವರ್ಧನೆಗಾಗಿ ಸಮಗ್ರ ಸಾಂಸ್ಕೃತಿಕ ಕನ್ನಡೀಕರಣ ಯೋಜನೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಲಾಗಿದೆ. ಅಲ್ಲದೆ, ಮುಂದಿನ ರಾಜ್ಯ ಬಜೆಟ್‌ನಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಅಭಿವೃದ್ಧಿಗಾಗಿ ₹1 ಕೋಟಿ ವಿಶೇಷ ಸಾಂಸ್ಕೃತಿಕ ನಿಧಿ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ನಡೆದ ಕೇರಳ ರಾಜ್ಯ ಕನ್ನಡ ಸಮ್ಮೇಳನ ಹಾಗೂ ಕೇರಳ–ಕರ್ನಾಟಕ ಉತ್ಸವಗಳ ಬಹಿರಂಗ ಅಧಿವೇಶನಗಳಲ್ಲಿ ಒಟ್ಟು ಏಳು ಬಾರಿ ಕೇರಳ ಕನ್ನಡ ಅಕಾಡೆಮಿ ಸ್ಥಾಪನೆಗೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ, 2026ರ ನವೆಂಬರ್ 7 ಮತ್ತು 8ರಂದು ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ನಡೆಯಲಿರುವ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ–2026 ಹಾಗೂ ಕೇರಳ–ಕರ್ನಾಟಕ ಉತ್ಸವದ ಉದ್ಘಾಟನಾ ಸಮಾರಂಭಕ್ಕೆ ಕೇರಳ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳನ್ನು ಆಹ್ವಾನಿಸುವ ತೀರ್ಮಾನ ಕೈಗೊಳ್ಳಲಾಗಿದ್ದು, ಇದೇ ವೇದಿಕೆಯಲ್ಲಿ ಕೇರಳ ಕನ್ನಡ ಅಕಾಡೆಮಿಯನ್ನು ಅಧಿಕೃತವಾಗಿ ಉದ್ಘಾಟಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಲಾಗಿದೆ.

ಈ ಕುರಿತು ಕಾಸರಗೋಡು ಲೋಕಸಭಾ ಸದಸ್ಯ ರಾಜಮೋಹನ ಉಣ್ಣಿತ್ತಾನ್, ಕಾಸರಗೋಡು ಶಾಸಕ ಕಲಟ್ರ ಮಾಹಿನ್, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಉದುಮ ಶಾಸಕ ಕೆ. ನೀಲಕಂಡನ್, ತ್ರಿಕ್ಕರಿಪುರ ಶಾಸಕ ಸಂದೀಪ್ ಜಿ. ವಾರಿಯಾರ್, ಹೊಸದುರ್ಗ ಶಾಸಕ ಗೋವಿಂದನ್ ಪಳ್ಳಿ ಕಾಫಿಲ್, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಸೇರಿದಂತೆ ಸಂಬಂಧಿತ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಈ ಮಾಹಿತಿಯನ್ನು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು–ಕೇರಳ ರಾಜ್ಯ ಘಟಕ, ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ ಹಾಗೂ ಕೇರಳ–ಕರ್ನಾಟಕ ಉತ್ಸವ ಸಮಿತಿಯ ಅಧ್ಯಕ್ಷ ಶಿವರಾಮ ಕಾಸರಗೋಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here