ಸ್ನಾನದ ವೀಡಿಯೊ ವೈರಲ್ ಮಾಡುವ ಬೆದರಿಕೆ

0
63

ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಯುವಕನ ಹತ್ಯೆ

ಗಾಂಧಿನಗರ : ಸ್ನಾನ ಮಾಡುತ್ತಿದ್ದ ವೇಳೆ ಮಹಿಳೆಯ ವಿಡಿಯೊವನ್ನು ಗುಪ್ತವಾಗಿ ಚಿತ್ರೀಕರಿಸಿ, ಅದನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದನೆಂಬ ಆರೋಪದ ಹಿನ್ನೆಲೆಯಲ್ಲಿ 20 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ದಂಪತಿ ಕೊಲೆ ಮಾಡಿರುವ ಘಟನೆ ಗುಜರಾತ್‌ನ ಗಾಂಧಿನಗರ ಜಿಲ್ಲೆಯ ಕಲೋಲ್ ತಾಲೂಕಿನಲ್ಲಿ ನಡೆದಿದೆ.

ಮೃತ ಯುವಕನನ್ನು ಹಾರ್ದಿಕ್ (20) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾಹಿತ ಮಹಿಳೆ ಹಾಗೂ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಹಾರ್ದಿಕ್ ಆರೋಪಿಗಳ ಮನೆಯ ಸಮೀಪದಲ್ಲೇ ವಾಸಿಸುತ್ತಿದ್ದ. ಸುಮಾರು ಒಂದೂವರೆ ರಿಂದ ಎರಡು ತಿಂಗಳ ಹಿಂದೆ ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಗುಪ್ತವಾಗಿ ಚಿತ್ರೀಕರಿಸಿದ್ದಾನೆ ಎನ್ನಲಾಗಿದೆ. ಬಳಿಕ ಆ ವಿಡಿಯೊವನ್ನು ಬಹಿರಂಗಪಡಿಸುವುದಾಗಿ ಬೆದರಿಸಿ, ಮಹಿಳೆಯೊಂದಿಗೆ ಬಲವಂತವಾಗಿ ಲೈಂಗಿಕ ಸಂಬಂಧ ಬೆಳೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಅಪಮಾನದ ಭಯದಿಂದ ಮಹಿಳೆ ಆತನ ಒತ್ತಡಕ್ಕೆ ಮಣಿದಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಮಹಿಳೆಯ ಪತಿ ಫ್ಯಾನ್ ದುರಸ್ತಿ ಹಾಗೂ ವಿದ್ಯುತ್ ವೈರಿಂಗ್ ಕೆಲಸ ಮಾಡುತ್ತಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ.

ಇದಾದ ಬಳಿಕವೂ ಹಾರ್ದಿಕ್ ನಿರಂತರವಾಗಿ ಮಹಿಳೆಯನ್ನು ಬೆದರಿಸಿ ಲೈಂಗಿಕವಾಗಿ ಶೋಷಿಸುತ್ತಿದ್ದನೆಂಬ ಆರೋಪ ಕೇಳಿಬಂದಿದ್ದು, ಇದೇ ಹಿನ್ನೆಲೆಯಲ್ಲಿ ದಂಪತಿ ಯುವಕನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹತ್ಯೆಗೆ ಕಾರಣವಾದ ನಿಖರ ಘಟನೆಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.