ಇಂದು (ಜು.18) ಇತಿಹಾಸ ಬರೆಯಲಿರುವ ‘ವಿಕ್ರಮ್-1’: ಭಾರತದ ಮೊದಲ ಖಾಸಗಿ ರಾಕೆಟ್ ಉಡಾವಣೆ

0
64

ಶ್ರೀಹರಿಕೋಟದಿಂದ ಇಂದು ‘ವಿಕ್ರಮ್-1’ ಹಾರಾಟ; ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ಅಧ್ಯಾಯ

ಶ್ರೀಹರಿಕೋಟ : ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿದ್ದು, ದೇಶದ ಪ್ರಮುಖ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯಾದ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿರುವ ‘ವಿಕ್ರಮ್-1’ (Vikram-1) ರಾಕೆಟ್ ಇಂದು ಬೆಳಗ್ಗೆ 11 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ.

ಭಾರತೀಯ ನೆಲದಿಂದ ಬಾಹ್ಯಾಕಾಶ ಕಕ್ಷೆ ತಲುಪಲಿರುವ ಸಂಪೂರ್ಣವಾಗಿ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಮೊದಲ ಆರ್ಬಿಟಲ್ ರಾಕೆಟ್ ಎಂಬ ಹೆಗ್ಗಳಿಕೆಗೆ ವಿಕ್ರಮ್-1 ಪಾತ್ರವಾಗಲಿದೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ. ವಿಕ್ರಮ ಸಾರಾಭಾಯಿ ಅವರ ಗೌರವಾರ್ಥ ಈ ರಾಕೆಟ್‌ಗೆ ‘ವಿಕ್ರಮ್-1’ ಎಂದು ಹೆಸರಿಡಲಾಗಿದೆ.

‘ಮಿಷನ್ ಆಗಮನ್’ ವಿಶೇಷತೆ ಏನು?

ಈ ಉಡಾವಣೆಯನ್ನು ‘ಮಿಷನ್ ಆಗಮನ್’ ಹೆಸರಿನಲ್ಲಿ ಕೈಗೊಳ್ಳಲಾಗುತ್ತಿದ್ದು, ತಂತ್ರಜ್ಞಾನ ಪ್ರದರ್ಶನ (Technology Demonstration) ಪೇಲೋಡ್‌ಗಳನ್ನು ಭೂಮಿಯ ಕಕ್ಷೆಗೆ ಕೊಂಡೊಯ್ಯುವುದು ಇದರ ಪ್ರಮುಖ ಉದ್ದೇಶವಾಗಿದೆ. ಭವಿಷ್ಯದ ವಾಣಿಜ್ಯ ಬಾಹ್ಯಾಕಾಶ ಸೇವೆಗಳ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸುವುದು ಈ ಮಿಷನ್‌ನ ಪ್ರಮುಖ ಗುರಿಯಾಗಿದೆ.

ಪ್ರಧಾನಿ ಮೋದಿ ಕೈಬರಹದ ಪೋಸ್ಟ್‌ಕಾರ್ಡ್ ಬಾಹ್ಯಾಕಾಶಕ್ಕೆ

ಈ ಮಿಷನ್‌ಗೆ ಭಾವನಾತ್ಮಕ ಮಹತ್ವವೂ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೈಬರಹದಲ್ಲಿ ಬರೆದಿರುವ, ‘ವಂದೇ ಮಾತರಂ’ ಎಂಬ ದೇಶಭಕ್ತಿ ಸಂದೇಶ ಹೊಂದಿರುವ ವಿಶೇಷ ಪೋಸ್ಟ್‌ಕಾರ್ಡ್ ಅನ್ನು ವಿಕ್ರಮ್-1 ಬಾಹ್ಯಾಕಾಶಕ್ಕೆ ಕೊಂಡೊಯ್ಯಲಿದೆ.

ಇದರ ಜೊತೆಗೆ, ಇಸ್ರೋದ ಹಾಲಿ ಹಾಗೂ ಮಾಜಿ ಅಧ್ಯಕ್ಷರು, ಭಾರತದ ಹೆಮ್ಮೆಯ ಗಗನಯಾತ್ರಿಗಳು ತಮ್ಮ ಕೈಬರಹದಲ್ಲಿ ಬರೆದಿರುವ ವಿಶೇಷ ಪೋಸ್ಟ್‌ಕಾರ್ಡ್‌ಗಳನ್ನೂ ಈ ರಾಕೆಟ್ ಹೊತ್ತೊಯ್ಯಲಿದೆ.

ಮೋದಿ ಏನು ಹೇಳಿದ್ದಾರೆ?

ವಿಕ್ರಮ್-1 ಉಡಾವಣೆ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ಇದು ಭಾರತದ ಬಾಹ್ಯಾಕಾಶ ಪಯಣದ ಐತಿಹಾಸಿಕ ಹೊಸ ಅಧ್ಯಾಯ. ಭಾರತದ ಮೊದಲ ಖಾಸಗಿ ಉಡಾವಣಾ ನೌಕೆಯಾದ ವಿಕ್ರಮ್-1 ಚೊಚ್ಚಲ ಆರ್ಬಿಟಲ್ ಉಡಾವಣೆಗೆ ಸಜ್ಜಾಗಿದೆ. ಈ ಮಿಷನ್ ಭಾರತದ ಯುವಕರ ಪ್ರತಿಭೆ, ದೃಢಸಂಕಲ್ಪ ಹಾಗೂ ಉದ್ಯಮಶೀಲತೆಯ ಪ್ರತೀಕವಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಸರ್ಕಾರ ತಂದಿರುವ ಸುಧಾರಣೆಗಳಿಂದ ಹೊಸ ಅವಕಾಶಗಳು ಸೃಷ್ಟಿಯಾಗಿವೆ” ಎಂದು ತಿಳಿಸಿದ್ದಾರೆ.

ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ದಿಕ್ಕು

ವಿಕ್ರಮ್-1 ಯಶಸ್ವಿಯಾದರೆ, ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮಕ್ಕೆ ಇದು ಮಹತ್ವದ ಉತ್ತೇಜನವಾಗಲಿದ್ದು, ಜಾಗತಿಕ ವಾಣಿಜ್ಯ ಉಡಾವಣೆ ಮಾರುಕಟ್ಟೆಯಲ್ಲಿ ಭಾರತದ ಸ್ಥಾನ ಮತ್ತಷ್ಟು ಬಲಗೊಳ್ಳಲಿದೆ. ಈ ಕಾರಣದಿಂದಲೇ ದೇಶ-ವಿದೇಶಗಳ ಬಾಹ್ಯಾಕಾಶ ವಲಯದ ತಜ್ಞರು ಹಾಗೂ ಭಾರತೀಯರು ಇಂದಿನ ಉಡಾವಣೆಯನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.