ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿ 29ನೇ ವರ್ಷದ ಯಕ್ಷ ಸಂಭ್ರಮ : ಕೆ. ಎಚ್. ದಾಸಪ್ಪ ರೈಗೆ ಯಕ್ಷದೇವ ಪ್ರಶಸ್ತಿ ಪ್ರದಾನ

0
8

ಮೂಡುಬಿದಿರೆ : ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿಯ 29ನೇ ವರ್ಷದ ಯಕ್ಷ ಸಂಭ್ರಮ ಕಾರ್ಯಕ್ರಮವು ಇಲ್ಲಿನ ರಿಂಗ್ ರೋಡ್ ನಲ್ಲಿರುವ ಪ್ರೀತಮ್ ಗಾರ್ಡನ್ ಸಭಾಭವನದಲ್ಲಿ ಜು. 17ರಂದು ಜರಗಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರ ಉಪಸ್ಥಿತಿಯಲ್ಲಿ, ಮಂಡಳಿಯ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಶ್ರಾಂತ ಯಕ್ಷಗಾನ ಕಲಾವಿದ ಕೆ. ಎಚ್. ದಾಸಪ್ಪ ರೈಯವರಿಗೆ 2026ನೇ ಸಾಲಿನ ಯಕ್ಷದೇವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಆಶೀರ್ವಚನ ನುಡಿದ ಶ್ರೀ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು “ಭಾರತೀಯ ಸಂಸ್ಕೃತಿಯನ್ನು ಸಾರುವ ಯಕ್ಷಗಾನದಂತಹ ಕಲಾ ಮಾಧ್ಯಮಗಳು ಹಾದಿ ತಪ್ಪುತ್ತಿರುವ ಸಮಾಜವನ್ನು ಸರಿದಾರಿಗೆ ತರಲು ಪೂರಕವಾಗಿದ್ದು ಮಕ್ಕಳಲ್ಲಿ ಇಂತಹ ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯ ಹತ್ತವರಿಂದ ಆಗಬೇಕಾಗಿದೆ. ಕಲೆಯ ಜೊತೆಗೆ ವಿದ್ಯಾರ್ಥಿಗಳನ್ನು, ಯುವ ಸಮಾಜವನ್ನು ಸಮಾಜಮುಖಿಯಾಗಿ ಬೆಳೆಸುವ ಪ್ರಯತ್ನ ಮಾಡುತ್ತಿರುವ ಯಕ್ಷದೇವ ಮಿತ್ರಕಲಾ ಮಂಡಳಿಯ ಕಾರ್ಯ ಪ್ರಶಂಸನೀಯವಾಗಿದೆ ಎಂದರು.

ಕರ್ನಾಟಕ ಬ್ಯಾಂಕ್ ಲಿ. ನ ಜಿ.ಎಂ. ನಾಗರಾಜ ಉಪಾಧ್ಯಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣರು ಮಾತನಾಡಿ ಲೋಕದಲ್ಲಿ ಧರ್ಮ ಉಳಿದರೆ ಮಾತ್ರ ಸುಭೀಕ್ಷೆ ನೆಲೆಸಲು ಸಾಧ್ಯ. ಪರಿಪೂರ್ಣವಾಗಿ ನವರಸ ತುಂಬಿರುವ ಯಕ್ಷಗಾನ ಒಂದು ಅಪೂರ್ವವಾದ ಕಲೆಯಾಗಿದ್ದು ಈ ಕಲೆಯ ಮೂಲಕ ಧರ್ಮ ಉಳಿಸುವ ಕಾರ್ಯ ನಿರಂತರ ನಡೆಯಲಿ ಎಂದರು.

ಜಿಲ್ಲಾ ಬಿಜೆಪಿ ಮಜಿ ಅಧ್ಯಕ್ಷ ಸುದರ್ಶನ ಎಂ. ಅವರು ಮಾತನಾಡಿ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆ, ಪೌರಾಣಿಕವನ್ನು ಮುಂದಿನ ಪೀಳಿಗೆ ಹಸ್ತಾಂತರಿಸುವ ಮಾಧ್ಯಮವಾಗಿ ಯಕ್ಷಗಾನ ಕಲೆ ಕೆಲಸ ಮಾಡುತ್ತಿದೆ ಎಂದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ದ.ಕ. ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಶುಭ ಹಾರೈಸಿದರು. ಮಂಡಳಿಯ ಸ್ಥಾಪಕ ಅಧ್ಯಕ್ಷ ಎಂ. ದೇವಾನಂದ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಮಂಡಳಿಯ ಉಪಾಧ್ಯಕ್ಷ ಬೊಕ್ಕಸ ಚಂದ್ರಶೇಖರ ರಾವ್, ಕಾರ್ಯದರ್ಶಿ ರವಿಪ್ರಸಾದ್ ಕೆ. ಶೆಟ್ಟಿ ಉಪಸ್ಥಿತರಿದ್ದರು. ನಂದಳಿಕೆ ಸುಬ್ರಹ್ಮಣ್ಯ ಬೈಪಡಿತ್ತಾಯ ಸನ್ಮಾನಪತ್ರ ವಾಚಿಸಿದರು. ವೀಣಾ ಡಿ. ಭಟ್ ಮತ್ತು ಭಾಗ್ಯಲಕ್ಷ್ಮಿ ಸುರೇಶ್ ಚಂದ್ರ ಪ್ರಾರ್ಥಿಸಿದರು. ನೆಲ್ಲಿಮಾರು ಸದಾಶಿವರಾವ್ ಕಾರ್ಯಕ್ರಮ ನಿರೂಪಿಸಿದರು.