ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಿಗಿಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಸಮಾಜಸೇವಕರು ಹಾಗೂ ಸಾಹಿತ್ಯ ಪರಿಪೋಷಕರಾದ ಕೆ.ಎಸ್. ವೀರಭದ್ರಪ್ಪ ಅವರಿಗೆ ಅಂತರ್ ರಾಜ್ಯ “ಕನ್ನಡ ಪಯಸ್ವಿನಿ ಅಚೀವ್‌ಮೆಂಟ್ ಅವಾರ್ಡ್-2026” ಪ್ರಶಸ್ತಿ ಲಭಿಸಿದೆ.
ಜುಲೈ 26ರಂದು ನಡೆಯಲಿರುವ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ ಹಾಗೂ ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆ.ಎಸ್. ವೀರಭದ್ರಪ್ಪ ಅವರು ಕಳೆದ 28 ವರ್ಷಗಳಿಂದ ಕನ್ನಡ ನುಡಿ ಹಾಗೂ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹರಪನಹಳ್ಳಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ತೆಲಿಗಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಾಗೂ ದಾವಣಗೆರೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ನೂರಕ್ಕೂ ಹೆಚ್ಚು ಕವಿಗೋಷ್ಠಿಗಳ ಆಯೋಜನೆ, ಕಥೆ, ಕವನ, ಲೇಖನ ಹಾಗೂ ಚುಟುಕುಗಳ ರಚನೆ, ಶಾಲಾ-ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸ, ಒಂಬತ್ತು ಬಾರಿ ರಕ್ತದಾನ, ಪರಿಸರ ಸಂರಕ್ಷಣೆಯ ಅಂಗವಾಗಿ 2,000ಕ್ಕೂ ಹೆಚ್ಚು ಗಿಡಗಳ ನೆಡುವಿಕೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆ ಮತ್ತು ನಿರೂಪಣೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಅವರು ಸಕ್ರಿಯರಾಗಿದ್ದಾರೆ.
ಇದಲ್ಲದೆ, 20ಕ್ಕೂ ಹೆಚ್ಚು ಕೃತಿಗಳಿಗೆ ಮುನ್ನುಡಿ, ಬೆನ್ನುಡಿ ಹಾಗೂ ಆಶಯನುಡಿ ಬರೆದಿರುವ ಅವರು, ‘ಹುಟ್ಟುತ್ತದೆ ಕವಿತೆ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದು, ಇನ್ನೂ ಆರು ಕೃತಿಗಳು ಮುದ್ರಣ ಹಂತದಲ್ಲಿವೆ.
ಕನ್ನಡ ಸಾಹಿತ್ಯ, ಸಮಾಜ ಸೇವೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

