ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಭದ್ರ ಅಡಿಪಾಯ – ರಘು ಮೂಲ್ಯ

ಮುಂಬಯಿ, ಜು 19: ಕುಲಾಲ ಸಂಘ ಮುಂಬಯಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವನ್ನು 18 ಜುಲೈ 2026 ರಂದು ಶನಿವಾರ ಸಂಜೆ ಸಂಘದ ಪೋರ್ಟ್‌ನ ಕೇಂದ್ರ ಕಚೇರಿಯಲ್ಲಿ ವಿಜೃಂಭಣೆಯಿಂದ ನಡೆಸಲಾಯಿತು. ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿ, ಯಾವುದೇ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತನಾಗಬಾರದು ಎಂಬ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪಾಲಕರು, ದಾನಿಗಳು ಹಾಗೂ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಾಲ ಸಂಘ ಮುಂಬಯಿಯ ಅಧ್ಯಕ್ಷ ರಘು ಮೂಲ್ಯ ವಹಿಸಿದ್ದರು. ಗೌರವಾಧ್ಯಕ್ಷ ದೇವದಾಸ್ ಕುಲಾಲ್, ಉಪಾಧ್ಯಕ್ಷ ಡಿ.ಐ. ಮೂಲ್ಯ, ಸಾಮಾಜಿಕ ಮತ್ತು ಆರ್ಥಿಕ ಸಮಿತಿಯ ಕಾರ್ಯಾಧ್ಯಕ್ಷ ರಘು ಆರ್. ಮೂಲ್ಯ, ಜ್ಯೋತಿ ಕೋ-ಆಫ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಹಾಗೂ ದಾನಿ ಗಿರೀಶ್ ಬಿ. ಸಾಲಿಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ ಬಂಜನ್ ಉಪಸ್ತಿರಿದ್ದು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಧ್ಯಕ್ಷೀಯ ಭಾಷಣದಲ್ಲಿ ರಘು ಮೂಲ್ಯ ಮಾತನಾಡಿ, 96 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕುಲಾಲ ಸಂಘ ಮುಂಬಯಿ ಶಿಕ್ಷಣ, ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಮಾಜದ ಏಳಿಗೆಗಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಹಿರಿಯರ ದೂರದೃಷ್ಟಿಯಿಂದ ಆರಂಭಗೊಂಡ ವಿದ್ಯಾರ್ಥಿ ಸಹಾಯ ಯೋಜನೆ ಇಂದು ನೂರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿದೆ. ಪ್ರತಿಯೊಂದು ಸ್ಥಳೀಯ ಸಮಿತಿಯ ಮೂಲಕ ದಾನಿಗಳ ಸಹಕಾರ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಆರ್ಥಿಕ ಸಂಕಷ್ಟ ಯಾವುದೇ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದು ಎಂಬುದು ಸಂಘದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಒಮ್ಮೆ ₹25 ಅಥವಾ ₹50 ವಿದ್ಯಾರ್ಥಿ ವೇತನ ಪಡೆದಿದ್ದ ವಿದ್ಯಾರ್ಥಿಗಳು ಇಂದು ವೈದ್ಯರು, ಇಂಜಿನಿಯರ್‌ಗಳು, ವಕೀಲರು, ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಮತ್ತೆ ಸಮಾಜಕ್ಕೆ ಸಹಾಯ ಮಾಡುತ್ತಿರುವುದು ಸಂಘದ ಹೆಮ್ಮೆ. ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಯಾವುದೇ ಸಂಕೋಚ ಅಥವಾ ನಾಚಿಕೆ ಪಡಬಾರದು. ಪಾಲಕರೊಂದಿಗೆ ಸಂಘದ ಕಾರ್ಯಕ್ರಮಗಳಿಗೆ ಬಂದು ಈ ಗೌರವವನ್ನು ಸ್ವೀಕರಿಸಬೇಕು. ಇಂದಿನ ವಿದ್ಯಾರ್ಥಿಗಳೇ ನಾಳಿನ ಸಮಾಜದ ನಾಯಕರು. ಉತ್ತಮ ಶಿಕ್ಷಣ, ಉತ್ತಮ ಸಂಸ್ಕಾರ ಹಾಗೂ ಸಮಾಜಸೇವೆಯ ಮನೋಭಾವ ಬೆಳೆಸಿಕೊಂಡು ಸಂಘದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಗೌರವಾಧ್ಯಕ್ಷ ದೇವದಾಸ್ ಕುಲಾಲ್ ಮಾತನಾಡಿ, ಸಂಘವು ಹಿಂದೆ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ವಿದ್ಯಾರ್ಥಿ ವೇತನದ ಮೂಲಕ ನೇರ ಶೈಕ್ಷಣಿಕ ನೆರವು ನೀಡಲಾಗುತ್ತಿದೆ. ಈ ವರ್ಷ 39 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ವಿದ್ಯಾರ್ಥಿಗಳು ಮತ್ತು ಪಾಲಕರು ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಮಾಜದೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ, ಶಿಸ್ತು ಹಾಗೂ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.
ವಿದ್ಯಾರ್ಥಿ ಬಳಗದ ಕಾರ್ಯಾಧ್ಯಕ್ಷ ರಘು ಆರ್. ಮೂಲ್ಯ ಮಾತನಾಡಿ, “ವಿದ್ಯಾದಾನವೇ ಮಹಾದಾನ” ಎಂಬ ಮಾತಿನಂತೆ ಸಂಘ ನೀಡುವ ಈ ನೆರವನ್ನು ಗೌರವದಿಂದ ಸ್ವೀಕರಿಸಿ, ಓದಿನ ಕಡೆ ಸಂಪೂರ್ಣ ಗಮನ ಹರಿಸಬೇಕು. ಉತ್ತಮ ಶಿಕ್ಷಣದಿಂದ ಕುಟುಂಬ, ಸಮಾಜ ಮತ್ತು ದೇಶದ ಕೀರ್ತಿಯನ್ನು ಹೆಚ್ಚಿಸುವ ಜವಾಬ್ದಾರಿ ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲಿದೆ ಎಂದು ತಿಳಿಸಿದರು.
ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಬಾರದು. ಆರ್ಥಿಕ ಸಮಸ್ಯೆಗಳಿದ್ದರೆ ಸ್ಥಳೀಯ ಸಮಿತಿಯ ಮೂಲಕ ಸಂಘವನ್ನು ಸಂಪರ್ಕಿಸಬೇಕು. ನಮ್ಮ ಮಹಾದಾನಿ ಸುನಿಲ್ ಸಾಲಿಯಾನ್ ಅವರು ಮುಂಬಯಿಯ ಕುಲಾಲ ಸಮಾಜದ ಎಸ್‌ಎಸ್‌ಸಿ ಮೆರಿಟ್ ವಿದ್ಯಾರ್ಥಿಗಳಿಗೆ ವಿಶೇಷ ನಗದು ಬಹುಮಾನ ನೀಡುವುದರ ಜೊತೆಗೆ ಅಗತ್ಯವಿದ್ದರೆ ಮುಂದಿನ ಕಾಲೇಜು ಶಿಕ್ಷಣಕ್ಕೂ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಲು ಶ್ರಮಿಸಬೇಕು ಎಂದರು.
ಜ್ಯೋತಿ ಕೋ-ಆಫ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಹಾಗೂ ದಾನಿ ಗಿರೀಶ್ ಬಿ. ಸಾಲಿಯಾನ್ ಮಾತನಾಡಿ, ಸಂಘ ಮತ್ತು ಜ್ಯೋತಿ ಕೋ-ಆಫ್ ಕ್ರೆಡಿಟ್ ಸೊಸೈಟಿ ನೀಡುವ ಎಲ್ಲಾ ಯೋಜನೆಗಳ ಮಾಹಿತಿ ಪಡೆದು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ₹10 ಲಕ್ಷದವರೆಗೆ ಶಿಕ್ಷಣ ಸಾಲದ ವ್ಯವಸ್ಥೆಯಿದ್ದು, ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ಉದ್ಯೋಗ ದೊರೆತ ಮೇಲೆ ಸಾಲವನ್ನು ಮರುಪಾವತಿಸಬಹುದು. ಸಮಾಜ, ದೇಶ, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿ ಉತ್ತಮ ಸಮಾಜಸೇವಕರಾಗಬೇಕು ಎಂದು ಕರೆ ನೀಡಿದರು.
ಸಂಘದ ಜೊತೆ ಕಾರ್ಯದರ್ಶಿ ಲಕ್ಷ್ಮಣ್ ಸಿ. ಮೂಲ್ಯ ಮಾತನಾಡಿ, ಹಿಂದೆ ಪುಸ್ತಕ ವಿತರಣೆ ಮಾಡುತ್ತಿದ್ದ ಸಂಘವು ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡುತ್ತಿದೆ. ಸದಸ್ಯರು ಮತ್ತು ದಾನಿಗಳ ಸಹಕಾರದಿಂದ ಈ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಂಘದ ಸ್ವಂತ ಭವನದಿಂದ ಆದಾಯ ಬಂದ ಬಳಿಕ ಇನ್ನಷ್ಟು ಹೆಚ್ಚಿನ ಮೊತ್ತದ ವಿದ್ಯಾರ್ಥಿ ವೇತನ ನೀಡುವ ಗುರಿ ಹೊಂದಿದ್ದೇವೆ. ಸಮಾಜದ ಪ್ರತಿಯೊಬ್ಬರೂ ಸಂಘದ ಸದಸ್ಯರಾಗಿ, ತ್ರೈಮಾಸಿಕ ಪತ್ರಿಕೆಯ ಪ್ರಯೋಜನ ಪಡೆದು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮೀರಾ ರೋಡ್–ವಿರಾರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶಂಕರ್ ವೈ ಮೂಲ್ಯ ಮಾತನಾಡಿ, ವಿದ್ಯಾರ್ಥಿಗಳು ಇತರರನ್ನು ನೋಡಿ ನಿರಾಶರಾಗದೆ ತಮ್ಮ ಗುರಿಯತ್ತ ಗಮನ ಹರಿಸಿ ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಬೇಕು. ಸಮಾಜದ ಏಳಿಗೆಯೇ ಸಂಘದ ಉದ್ದೇಶವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಮಾಜದೊಂದಿಗೆ ಬೆರೆಯಬೇಕು .ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಘದ ಪರಿಚಯ ಮಾಡಿಸಿದರೆ ಸಮಾಜದ ಬಗ್ಗೆ ಪ್ರೀತಿ ಮತ್ತು ಜವಾಬ್ದಾರಿ ಬೆಳೆಯುತ್ತದೆ ಎಂದು ಹೇಳಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ ಬಂಜನ್ ಮಾತನಾಡಿ, ವಿದ್ಯಾರ್ಥಿಗಳು ಪಾಲಕರೊಂದಿಗೆ ಬಂದು ಪ್ರೀತಿಯಿಂದ ವಿದ್ಯಾರ್ಥಿ ವೇತನ ಸ್ವೀಕರಿಸುವುದರಿಂದ ಅವರಲ್ಲಿ ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುತ್ತದೆ. ಮುಂದಿನ ದಿನಗಳಲ್ಲಿ ಅವರೂ ಸಮಾಜಸೇವೆಯಲ್ಲಿ ತೊಡಗಿ ಸಂಘದ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಗುರುವಂದನಾ ಭಜನಾ ಮಂಡಳಿಯ ಕಾರ್ಯಾಧ್ಯಕ್ಷ ಸುಂದರ್ ಎನ್. ಮೂಲ್ಯ, ನವಿ ಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸದಾನಂದ ಕುಲಾಲ್,CMM ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಉದಯ್ ಅತ್ತಾವರ.ಚರ್ಚ್‌ಗೇಟ್–ದಹಿಸರ್ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಸುಕುಮಾರ್ ಸಾಲಿಯಾನ್, ಥಾಣೆ–ಕಾಶರ–ಖರ್ಜಾತ್ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಹರಿಯಪ್ಪ ಮೂಲ್ಯ, ಉಮೇಶ್ ಬಂಗೇರ, ಅಶೋಕ್ ಕುಲಾಲ್, ಯುವ ವಿಭಾಗದ ತೇಜಸ್ ಮೂಲ್ಯ, ಅಶೋಕ್ ಬಂಜನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಂಘದ ಕೋಶಾಧಿಕಾರಿ ಜಯ ಅಂಚನ್ ದಾನಿಗಳ ಹೆಸರನ್ನು ವಾಚಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್ ಹಾಗೂ ಜೊತೆ ಕಾರ್ಯದರ್ಶಿ ಲಕ್ಷ್ಮಣ್ ಸಿ. ಮೂಲ್ಯ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಾಧ್ಯಕ್ಷೇ ಸುಚಿತಾ ಬಂಜನ್ ಮತ್ತು ಜೊತೆ ಕೋಶಾಧಿಕಾರಿ ರೇಣುಕಾ ಸಾಲಿಯಾನ್ ಪ್ರಾರ್ಥನೆ ಗೈದರು.
ಕೊನೆಯಲ್ಲಿ ದಾನಿಗಳು, ಪಾಲಕರು, ವಿದ್ಯಾರ್ಥಿಗಳು ಹಾಗೂ ಉಪಸ್ಥಿತರಿದ್ದ ಎಲ್ಲಾ ಗಣ್ಯರಿಗೆ ಸಂಘದ ವತಿಯಿಂದ ಧನ್ಯವಾದ ಸಲ್ಲಿಸಲಾಯಿತು.

