ಸಮಾಜಕ್ಕೊಂದು ಸುಂದರ ಸಂದೇಶವನ್ನು ನೀಡುವ ನಾಟಕ ಮೂಡಿ ಬರಲಿ: ವೇ.ಮೂರ್ತಿ ವೆಂಕಟರಮಣ ಅಸ್ರಣ್ಣ

ಕಾರ್ಕಳ : ತುಳುರಂಗಭೂಮಿಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತುಳುವ ಸಿರಿ ಕಲಾವಿದರು ನಂದಳಿಕೆ ನಾಟಕ ತಂಡದ ಈ ವರ್ಷದ ನೂತನ ತುಳು ನಾಟಕ ‘ಆಯೆ ಮನಿಪುಜೆ’ಯ ಶುಭಮುಹೂರ್ತ ಕಾರ್ಯಕ್ರಮವು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ಇತ್ತೀಚೆಗೆ ಜರುಗಿತು.
ದೇವಸ್ಥಾನದ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಟೀಲು ದೇವಾಲಯದ ಅನುವಂಶಿಕ ಮೊಕ್ತೇಸರ ವೇ.ಮೂ. ವಾಸುದೇವ ಅಸ್ರಣ್ಣ, ನಾಟಕದ ಶುಭಮುಹೂರ್ತ ನೆರವೇರಿಸಿ ಮಾತನಾಡಿ, ನಂದಳಿಕೆ ತುಳುವ ಸಿರಿ ತಂಡವು ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ. ‘ಆಯೆ ಮನಿಪುಜೆ’ ಎಂಬ ವಿಭಿನ್ನ ಶೀರ್ಷಿಕೆಯ ಈ ನಾಟಕವು ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವಂತಾಗಲಿ ಮತ್ತು ನಾಟಕ ತಂಡಕ್ಕೆ ಅಭೂತಪೂರ್ವ ಯಶಸ್ಸು ಸಿಗಲಿ ಎಂದರು.
ವೇ.ಮೂರ್ತಿ ವೆಂಕಟರಮಣ ಅಸ್ರಣ್ಣ ತುಳುನಾಡಿನಲ್ಲಿ ರಂಗಭೂಮಿಯೂ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ನಾಟಕದ ಮೂಲಕ ಕಲಾಸೇವೆ ನಿತ್ಯ ನಿರಂತರ ನಡೆಯಲಿ. ಸಮಾಜಕ್ಕೊಂದು ಸುಂದರ ಸಂದೇಶವನ್ನು ನೀಡುವ ಮೂಲಕ ಸಮಾಜದ ಬದಲಾವಣೆಯಲ್ಲೂ ನಾಟಕ ಪ್ರಮುಖ ಪಾತ್ರ ನಿರ್ವಹಿಸಲಿ. ಇಡೀ ತಂಡಕ್ಕೆ ಈ ನಾಟಕದ ಮೂಲಕ ಯಶಸ್ಸು ಸಿಗುವಂತಾಗಲಿ ಎಂದು ಶುಭ ಹಾರೈಸಿದರು.
ಕಿನ್ನಿಗೋಳಿ ವಿಜಯಾ ಕಲಾವಿದರು ನಾಟಕ ತಂಡದ ಅಧ್ಯಕ್ಷ ಶರತ್ ಶೆಟ್ಟಿ ಸಂಕಲಕರಿಯ ಮಾತನಾಡಿ, ನಂದಳಿಕೆ ತುಳುವ ಸಿರಿ ತಂಡವು ಕೇವಲ ಮನರಂಜನೆಗಾಗಿ ನಾಟಕ ಮಾಡುತ್ತಿಲ್ಲ, ಬದಲಾಗಿ ತುಳುನಾಡಿನ ಮಣ್ಣಿನ ಸೊಗಡನ್ನು ಮತ್ತು ಮೌಲ್ಯಗಳನ್ನು ಹೊಸ ತಲೆಮಾರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ‘ಆಯೆ ಮನಿಪುಜೆ’ ಶೀರ್ಷಿಕೆಯೇ ಬಹಳ ಕುತೂಹಲ ಮೂಡಿಸುತ್ತಿದೆ. ನಾಟಕದ ಪ್ರತಿಯೊಂದು ಪಾತ್ರಗಳೂ ಕರಾವಳಿಯ ಜನಜೀವನವನ್ನು ಕಣ್ಣಿಗೆ ಕಟ್ಟುವಂತೆ ಮೂಡಿಬರಲಿ. ಇಂತಹ ತಂಡಗಳಿಗೆ ಸಮಾಜದ ಬೆಂಬಲ ಸದಾ ಇರಬೇಕು ಎಂದರು.
ಈ ಸಂದರ್ಭದಲ್ಲಿ ತುಳುವ ಸಿರಿ ಕಲಾವಿದರು ತಂಡದ ಅಧ್ಯಕ್ಷ ಹಾಗೂ ನಾಟಕ ರಚನೆಗಾರ ನಿರ್ದೇಶಕ ಹರಿಪ್ರಸಾದ್ ನಂದಳಿಕೆ, ಸಾಹಿತ್ಯ ರಚನೆಗಾರ ಅಶೋಕ್ ಪಳ್ಳಿ, ಕಲಾವಿದರಾದ ರಾಜೇಶ್ ಅಮಿನ್ ಕಡಂದಲೆ, ನಿತೇಶ್ ಕಾಂತಾವರ, ಪ್ರತೀಕ್ ಸಾಲ್ಯಾನ್ ಮೂಡಬಿದಿರೆ, ಪ್ರಶಾಂತ್ ಆಚಾರ್ಯ ವರ್ಣಬೆಟ್ಟು, ಯತೀಶ್ ಪೂಜಾರಿ ಪಾಲಡ್ಕ, ಮೋನಿಕಾ ಅಂದ್ರಾದೆ, ಚೈತ್ರ ಚೇತನಹಳ್ಳಿ, ಶ್ರೀನಿವಾಸ್ ಇನ್ನಾ, ಸಂಪತ್ ಸಾಣೂರು, ಸೂರಾಜ್ ಸಾಲ್ಯಾನ್ ನಾನಿಲ್ತಾರ್, ದೀಪಿಕಾ ಪೊಸ್ರಾಲು, ಪವನಾ ಪ್ರತೀಕ್ ಸಾಲ್ಯಾನ್, ಸಂಗೀತ ನಿರ್ದೇಶಕ ಪವನ್ ಕಡಂದಲೆ, ರಂಗವಿನ್ಯಾಸಗಾರ ದುರ್ಗಾಪ್ರಸಾದ್ ಕೊಂಡೆಲ, ಹಾಗೂ ತಾಂತ್ರಿಕ ವರ್ಗದವರು ಉಪಸ್ಥಿತರಿದ್ದರು. ಆಗಸ್ಟ್ ಅಂತ್ಯಕ್ಕೆ ನಾಟಕ ಸೆಟ್ ಏರಲಿದ್ದು ಪ್ರದರ್ಶನಕ್ಕೆ 9880202986 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

