ಉಡುಪಿ : ಸಂತೆಕಟ್ಟೆ ಪ್ರದೇಶದಲ್ಲಿ ಸುಮಾರು 50 ವರ್ಷಗಳಿಂದ ಸಾರ್ವಜನಿಕರಿಗೆ ನೆರಳು, ಶುದ್ಧ ಗಾಳಿ ಹಾಗೂ ಪರಿಸರ ಸಮತೋಲನವನ್ನು ಒದಗಿಸುತ್ತಿದ್ದ ಬೃಹತ್ ಮರವನ್ನು ಏಕಾಏಕಿ ಕಡಿದು ಹಾಕಿರುವ ಘಟನೆಗೆ ತುಳುನಾಡ ರಕ್ಷಣಾ ವೇದಿಕೆ, ಉಡುಪಿ ಜಿಲ್ಲಾ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಮಗ್ರ ತನಿಖೆಗೆ ಆಗ್ರಹಿಸಿದೆ.
ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಮಾತನಾಡಿ, ದಶಕಗಳಿಂದ ಸಾವಿರಾರು ಸಾರ್ವಜನಿಕರಿಗೆ ಆಶ್ರಯ ನೀಡುತ್ತಿದ್ದ ಹಾಗೂ ಪರಿಸರದ ಅಮೂಲ್ಯ ಸಂಪತ್ತಾಗಿದ್ದ ಮರವನ್ನು ಯಾವುದೇ ಸ್ಪಷ್ಟ ಕಾರಣವಿಲ್ಲದೆ ಹಾಗೂ ಸಾರ್ವಜನಿಕರ ಭಾವನೆಗಳನ್ನು ಲೆಕ್ಕಿಸದೆ ಕಡಿದು ಹಾಕಿರುವುದು ಅತ್ಯಂತ ಖಂಡನೀಯ ಕೃತ್ಯವಾಗಿದೆ ಎಂದು ಹೇಳಿದರು.

“ಇದು ಕೇವಲ ಒಂದು ಮರದ ನಾಶವಲ್ಲ, ಪ್ರಕೃತಿಯ ಮೇಲಿನ ಕ್ರೌರ್ಯ ಹಾಗೂ ಪರಿಸರ ಸಂರಕ್ಷಣೆಯ ಮೌಲ್ಯಗಳಿಗೆ ಮಾಡಿದ ಅಪಮಾನವಾಗಿದೆ. ಹವಾಮಾನ ವೈಪರೀತ್ಯ, ಉಷ್ಣಾಂಶ ಏರಿಕೆ ಹಾಗೂ ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ ಹಳೆಯ ಮರಗಳನ್ನು ಸಂರಕ್ಷಿಸುವುದು ಅತ್ಯಗತ್ಯ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ದಶಕಗಳ ಇತಿಹಾಸ ಹೊಂದಿರುವ ಮರಗಳನ್ನು ಮನಬಂದಂತೆ ಕಡಿದು ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ,” ಎಂದು ಅವರು ಹೇಳಿದರು.
ಮರ ಕಡಿತಕ್ಕೆ ಸಂಬಂಧಿಸಿದಂತೆ ಯಾವ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ, ಪರಿಸರ ಇಲಾಖೆಯ ನಿಯಮಗಳನ್ನು ಪಾಲಿಸಲಾಗಿದೆಯೇ ಹಾಗೂ ಮರ ತೆರವುಗೊಳಿಸುವ ಅಗತ್ಯ ಏನಿತ್ತು ಎಂಬುದರ ಕುರಿತು ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ನಿಯಮ ಉಲ್ಲಂಘನೆ ಅಥವಾ ಅಧಿಕಾರ ದುರುಪಯೋಗ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಕಡಿದು ಹಾಕಲಾದ ಮರದ ಸ್ಥಳದಲ್ಲಿ ತಕ್ಷಣವೇ ಸ್ಥಳೀಯ ಜಾತಿಯ ದೊಡ್ಡ ಗಾತ್ರದ ಗಿಡಗಳನ್ನು ನೆಟ್ಟು ಅವುಗಳ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಉಡುಪಿ ಜಿಲ್ಲೆಯಾದ್ಯಂತ 25 ವರ್ಷಕ್ಕಿಂತ ಹಳೆಯ ಮರಗಳನ್ನು ಗುರುತಿಸಿ “ಪರಂಪರೆ ಮರಗಳು” ಎಂದು ಘೋಷಿಸಿ ಸಂರಕ್ಷಿಸಲು ವಿಶೇಷ ಯೋಜನೆ ರೂಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪರಿಸರ ರಕ್ಷಣೆಯ ವಿಚಾರದಲ್ಲಿ ತುಳುನಾಡ ರಕ್ಷಣಾ ವೇದಿಕೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಜನರ ಆರೋಗ್ಯ, ಪರಿಸರ ಹಾಗೂ ಮುಂದಿನ ಪೀಳಿಗೆಯ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಕ್ರಮದ ವಿರುದ್ಧ ರಾಜ್ಯಾಧ್ಯಕ್ಷ ಯೋಗೀಶ್ ಶೆಟ್ಟಿಜಪ್ಪು ಅವರ ನೇತೃತ್ವದಲ್ಲಿ ಕಾನೂನುಬದ್ಧ ಹಾಗೂ ಪ್ರಜಾಪ್ರಭುತ್ವದ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಫ್ರ್ಯಾಂಕಿ ಡಿಸೋಜ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಸೇರಿದಂತೆ ಸಂಘಟನೆಯ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

