ಉಡುಪಿ: ತಮಿಳುನಾಡು ಮೂಲದ ಕೆಲವರು ಉಡುಪಿಯಲ್ಲಿ ಸುಳ್ಳು ದಾಖಲೆಗಳನ್ನು ನೀಡಿ ಪರಿಶಿಷ್ಟ ಜಾತಿಯ (ಎಸ್‌ಸಿ) ಪ್ರಮಾಣಪತ್ರ ಪಡೆದುಕೊಂಡಿದ್ದಾರೆ ಎಂಬ ಗಂಭೀರ ದೂರನ್ನು ಮುಖಂಡರು ಸಭೆಯಲ್ಲಿ ಮಂಡಿಸಿದರು. ಈ ದೂರಿನ ಹಿನ್ನೆಲೆಯಲ್ಲಿ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (DCRE) ಪೊಲೀಸ್ ಠಾಣೆಯ ಮೂಲಕ ಸಮಗ್ರ ತನಿಖೆ ನಡೆಸುವಂತೆ ಎಸ್‌ಪಿ ಹರಿರಾಮ್ ಶಂಕರ್ ಸೂಚನೆ ನೀಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಿತರಕ್ಷಣೆ ಹಾಗೂ ಸಮುದಾಯದ ಕುಂದುಕೊರತೆಗಳನ್ನು ಆಲಿಸುವ ನಿಟ್ಟಿನಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ವಿಶೇಷ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಲಿತರ ಹಣ ದುರ್ಬಳಕೆ ತನಿಖೆಗೆ ಸಮಾಜ ಕಲ್ಯಾಣ ಇಲಾಖೆಗೆ ನಿರ್ದೇಶನ
ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಲಿತರ ಏಳಿಗೆ ಹಾಗೂ ಕಲ್ಯಾಣಕ್ಕಾಗಿ ಸರ್ಕಾರದಿಂದ ಮಂಜೂರಾಗಿದ್ದ ಹಣ ದುರ್ಬಳಕೆಯಾಗಿದೆ ಎಂಬ ದೂರು ಕೇಳಿಬಂದಿದೆ. ಈ ಆರ್ಥಿಕ ಅಕ್ರಮದ ಕುರಿತು ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸಭೆಯಲ್ಲೇ ಕಡಕ್ ನಿರ್ದೇಶನ ನೀಡಲಾಯಿತು. ಇದೇ ವೇಳೆ, ಎಸ್‌ಸಿ-ಎಸ್‌ಟಿ ದೌರ್ಜನ್ಯ ಪ್ರಕರಣಗಳ ಸಂತ್ರಸ್ತರಿಗೆ ಕಾನೂನುಬದ್ಧವಾಗಿ ನ್ಯಾಯಯುತ ಪರಿಹಾರ ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ ಎಂಬ ಅಹವಾಲಿಗೂ ಸ್ಪಂದಿಸಿದ ಎಸ್‌ಪಿ, ಈ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದರು.
ಡಿಸಿಆರ್‌ಇ ಠಾಣೆಗೆ ಸಿಬ್ಬಂದಿ ಕೊರತೆ
ದಲಿತರಿಗೆ ನ್ಯಾಯ ಒದಗಿಸಲು ಜಿಲ್ಲೆಗಳಲ್ಲಿ ಡಿಸಿಆರ್‌ಇ ಠಾಣೆಗಳಿದ್ದರೂ ಅಗತ್ಯ ಅಧಿಕಾರಿ ಹಾಗೂ ಸಿಬ್ಬಂದಿ ಇಲ್ಲದೆ ನ್ಯಾಯ ವಿಳಂಬವಾಗುತ್ತಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಮುಖಂಡರು ಕೋರಿದರು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ ವಿಜಿಲೆನ್ಸ್ ಕಮಿಟಿಯ ಹಾಲಿ ಸದಸ್ಯರನ್ನು ಬದಲಾಯಿಸುವಂತೆ ದಲಿತ ಮುಖಂಡರು ಮನವಿ ಮಾಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಸದಾನಂದ ನಾಯಕ್ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 53ಕ್ಕೂ ಹೆಚ್ಚು ದಲಿತ ಮುಖಂಡರು ಅಹವಾಲುಗಳನ್ನು ಸಲ್ಲಿಸಿದರು.

